ಪಂಚಾಂಗವೆಂದರೆ ಅರ್ಥವಾಗದ ಶ್ಲೋಕಗಳ ಕಗ್ಗಂಟಲ್ಲ!
ಯುಗಾದಿ, ಪಂಚಾಂಗ ಪೂಜಿಸುವ ದಿನ.
ತಿಥಿ,
ವಾರ,
ನಕ್ಷತ್ರ,
ಯೋಗ ಹಾಗೂ
ಕರ್ಣ
ಎಂಬ ಐದು ಅಂಗಗಳ ವೈಜ್ಞಾನಿಕ ಸಮ್ಮಿಲನವೇ ಪಂಚಾಂಗ....
ಲೇಖಕರು : ಟಿ.ಎಂ. ಸತೀಶ್, ಸಂಪಾದಕರು, ourtemples.in
ಪಂಚಾಂಗ ನೋಡುವುದು ಅರ್ಥಾತ್ ಓದುವುದೇ ಒಂದು ಕಲೆ. ಎಲ್ಲರಿಗೂ ಪಂಚಾಂಗ ನೋಡಲು ಬರುವುದಿಲ್ಲ. ಹಲವರು ಪಂಚಾಂಗ ಎಂದರೆ ಅರ್ಥವಾಗದ ಕಗ್ಗಂಟು, ಅದು ಪುರೋಹಿತರ ಸ್ವತ್ತು ಎಂದೇ ತಿಳಿದಿದ್ದಾರೆ.
ವಾಸ್ತವವಾಗಿ ಪಂಚಾಂಗ ಎಂದರೆ ಅರ್ಥವಾಗದ ಹಲವು ಶ್ಲೋಕಗಳಿಂದ ಕೂಡಿದ ಕಗ್ಗಂಟಲ್ಲ. ಬದಲಾಗಿ ಪಂಚಾಂಗ ಎಂಬುದು ಜನ ಜೀವನದ ನಿತ್ಯ ನಡೆವಳಿಕೆಗಳನ್ನು ವೈಜ್ಞಾನಿಕ ಆಧಾರಗಳ ಮೇಲೆ ವಿಶ್ಲೇಷಿಸುವ ಅತ್ಯದ್ಭುತ ಕಾಲಗಣನಾ ಶಾಸ್ತ್ರ.
ನಾವು ದೈನಂದಿನ ಲೌಕಿಕ ಚಟುವಟಿಕೆಗೆ ಬಳಸುವ ಜನವರಿ1ರಿಂದ ಡಿಸೆಂಬರ್ 31ರವರೆಗೆ ವಾರ ದಿನಾಂಕ ತೋರಿಸುವ ರೋಮನ್ ಕ್ಯಾಲೆಂಡರ್ ಹುಟ್ಟಿದ್ದು ಕ್ರಿಸ್ತ ಪೂರ್ವ 753ರಲ್ಲಿ. ಆದರೆ, ಅದಕ್ಕಿಂತ ಸಾವಿರಾರು ವರ್ಷಗಳ ಹಿಂದೆ ಅಂದರೆ ಸುಮಾರು 10 ಸಾವಿರಕ್ಕೂ ಹೆಚ್ಚು ವರ್ಷಗಳ ಹಿಂದೆಯೇ ಯುಗಯುಗಗಳಿಂದ ಹಿಂದೂ ಪಂಚಾಂಗ ಕಾಲಗಣನಾ ಶಾಸ್ತ್ರವಾಗಿತ್ತು ಎಂದು ವಿಶ್ಲೇಷಿಸಲಾಗುತ್ತದೆ. ಇದಕ್ಕೆ ವೇದ, ಪುರಾಣಗಳಲ್ಲಿ ಹಲವು ಆಧಾರಗಳೂ ದೊರಕುತ್ತವೆ.
ಈಗ ವಿಶ್ವ ವ್ಯಾಪಿ ಚಾಲ್ತಿಯಲ್ಲಿರುವ ಕ್ಯಾಲೆಂಡರ್ ಗಳು ಇನ್ನೂ ಹುಟ್ಟದಿದ್ದ ಕಾಲದಲ್ಲಿ, ಹುಟ್ಟು, ಸಾವು, ವಿವಾಹದಿನ, ಗ್ರಹಣ ವಿಚಾರ ಸೇರಿದಂತೆ ಬದುಕಿನ ಮಹತ್ವದ ಘಟನೆಗಳನ್ನು ನೆನಪಿನಲ್ಲಿಟ್ಟುಕೊಳ್ಳಲೆಂದೇ ವೈಜ್ಞಾನಿಕ ತಳಹದಿಯ ಮೇಲೆ ತಯಾರಿಸಿದ ವಾರ್ಷಿಕ ಕೈಪಿಡಿಯೇ ಪಂಚಾಂಗ.
ಐದರ ಸಮಾಗಮ: ವಾಸ್ತವವಾಗಿ ಪಂಚಾಂಗವೆಂಬುದು ತಿಥಿ, ವಾರ, ನಕ್ಷತ್ರ, ಯೋಗ ಹಾಗೂ ಕರ್ಣ ಎಂಬ ಐದು ವೈeನಿಕ ಅಂಗಗಳ ಸಮ್ಮಿಲನ ಹಾಗೂ ಮಾಹಿತಿ ಸಂಚಯ.
ಸೂರ್ಯದ, ಚಂದ್ರ, ಭೂಮಿಯೂ ಸೇರಿದಂತೆ ನವಗ್ರಹಗಳ ಚಲನೆಯನ್ನೂ ಗುರುತಿಸುತ್ತಿದ್ದ ಶ್ರೇಷ್ಠ ಖಭೌತಜ್ಞರಾಗಿದ್ದ ನಮ್ಮ ಪೂರ್ವಿಕರು ವೈಜ್ಞಾನಿಕ ತಳಹದಿಯ ಅಧ್ಯಯನದಿಂದ ತಿಥಿ, ವಾರ, ನಕ್ಷತ್ರ, ಯೋಗ ಹಾಗೂ ಕರ್ಣಗಳನ್ನು ವಿಶ್ಲೇಷಿಸಿ ಪಂಚಾಂಗ ಸೃಷ್ಟಿಸಿದ್ದರು. ಗ್ರಹಣ ಯಾವ ದಿನ ಘಟಿಸುತ್ತದೆ. ಹುಣ್ಣಿಮೆ, ಅಮಾವಾಸ್ಯೆ ಎಂದು ಬರುತ್ತದೆ ಎಂಬಿತ್ಯಾದಿ ಮಹತ್ವದ ಮಾಹಿತಿಗಳನ್ನು ಈ ಪಂಚಾಂಗದಲ್ಲಿ ಸೆರೆಹಿಡಿಯುತ್ತಿದ್ದರು. ಈ ಎಲ್ಲ ಲೆಕ್ಕಾಚಾರಗಳಿಗೆ ತಿಥಿ, ವಾರ, ನಕ್ಷತ್ರ, ಕರ್ಣ ಹಾಗೂ ಯೋಗವೇ ಆಧಾರವಾಗಿತ್ತು.
ತಿಥಿ, ವಾರ, ನಕ್ಷತ್ರ, ಕರ್ಣ, ಯೋಗ ಎಂದರೇನು ?
ನಕ್ಷತ್ರ : ಆಗಸದಲ್ಲಿ ನಮಗೆ ಕೋಟ್ಯನುಕೋಟಿ ನಕ್ಷತ್ರಗಳು ಕಾಣಿಸಿದರೂ, ಸೂರ್ಯಸನ ಸುತ್ತ ಇರುವ ಅಶ್ವಿನಿ, ಭರಣಿ, ಕೃತ್ತಿಕೆ, ರೋಹಿಣಿ, ಮೃಗಶಿರೆ, ಆರಿದ್ರೆ, ಪುನರ್ವಸು, ಪುಷ್ಯ... ಇತ್ಯಾದಿ 27 ನಕ್ಷತ್ರಗಳನ್ನು ಮಾತ್ರ ಜ್ಯೋತಿಷಿಗಳು ದಿನ ಗಣನೆಗೆ ಪರಿಗಣಿಸಿದ್ದಾರೆ. ಇನ್ನುಳಿದ ನಕ್ಷತ್ರಗಳನ್ನು ಆಕಾಶಕಾಯಗಳು ಅಥವಾ ತ್ಯಾಜ್ಯ ನಕ್ಷತ್ರ ಎಂದು ಅವರು ವಿಶ್ಲೇಷಿಸಿದ್ದಾರೆ. ನಮ್ಮ ಭಾರತೀಯ ಋಷಿಮುನಿಗಳು ಹೀಗೆ ನಿರ್ಣಯಕ್ಕೆ ಬರಲು ಬಲವಾದ ವೈಜ್ಞಾನಿಕ ಆಧಾರವಿದೆ. ನಕ್ಷತ್ರದಿಂದ ದಿನವನ್ನು ಗುರುತಿಸುವುದು ಅತಿ ಪುರಾತನ ಪದ್ಧತಿಯಾಗಿದೆ. ಅದು ಹೇಗೆ ಎಂಬುದೂ ಅತಿ ಸ್ವಾರಸ್ಯಕರ. ಅಷ್ಟೇ ಅಲ್ಲ ನಮ್ಮ ಹಿರಿಯರ ಜ್ಞಾನಕ್ಕೆ ಹಿಡಿದ ಕನ್ನಡಿ. ನಕ್ಷತ್ರಮಂಡಲದಲ್ಲಿ ಚಂದ್ರಸ್ಥಾನ ಗಂಟೆ ಗಂಟೆಗೂ ಬದಲಾಗುತ್ತಿರುತ್ತದೆ. ಒಂದು ರಾತ್ರಿ ಚಂದ್ರನ ಸಮೀಪದಲ್ಲಿ ಯಾವ ನಕ್ಷತ್ರ ಇರುತ್ತದೆ ಎಂದು ಗುರುತಿಸಿದ್ದಾರೆ. ಅದೇ ನಕ್ಷತ್ರದ ಸಮೀಪಕ್ಕೆ ಚಂದ್ರ ಮತ್ತೆ ಯಾವಾಗ ಬರುತ್ತಾನೆ ಎಂಬುದನ್ನೂ ಅವರು ಗುರುತಿಸಿದ್ದಾರೆ. ಇಂದು ಒಂದು ನಕ್ಷತ್ರದ ಬಳಿ ಕಾಣಿಸಿಕೊಳ್ಳುವ ಚಂದ್ರ ಮತ್ತೆ ಅದೇ ನಕ್ಷತ್ರದ ಸನಿಹಕ್ಕೆ ಬರಲು ಸುಮಾರು 27.32ದಿನಗಳು ಬೇಕಾಗುತ್ತದೆಂಬುದನ್ನು ನಿರ್ಧರಿಸಿದ್ದಾರೆ. ಹೀಗಾಗಿಯೇ ತಿಂಗಳಲ್ಲಿ 30 ದಿನ ಬಂದಿರುವುದು. ಈ ಚಲನೆಗೆ ಅನುಗುಣವಾಗಿಯೇ ಎರಡೆರಡು ದಿನ ಒಂದೇ ತಿಥಿ ಇರುವುದು ಎಂಬುದನ್ನು ನಮ್ಮ ಪುರಾತನ ಭಾರತೀಯ ಖಗೋಳಜ್ಞರು ನಿರ್ಣಯಿಸಿದ್ದರು. ವೈಜ್ಞಾನಿಕ ಉಪಕರಣಗಳೇ ಇಲ್ಲದ ಸಮಯದಲ್ಲಿ ಈ ಎಲ್ಲ ಲೆಕ್ಕಾಚಾರ ಮಾಡಿದ ನಮ್ಮ ಪೂರ್ವಿಕರ ಜ್ಞಾನ ಶ್ರೀಮಂತಿಕೆಗೆ ನಾವೆಲ್ಲಾ ತಲೆ ಬಾಗಲೇ ಬೇಕು.
ತಿಥಿ : ತಿಥಿ ಎಂದರೆ, ಭೂಮಿಯನ್ನು ಸುತ್ತಲು ಚಂದ್ರನು ಒಂದು ದಿನದಲ್ಲಿ ತೆಗೆದುಕೊಳ್ಳುವ ಅವಧಿ. ಚಂದ್ರನು ನಿತ್ಯ ಸುಮಾರು 12 ಡಿಗ್ರಿಗಳಷ್ಟು ಸಂಚರಿಸುತ್ತಾನೆ. (ಈ ಚಲನೆಯಲ್ಲಿ ಚಂದ್ರ ಭೂಮಿಯ ಮೇಲೆ ಬೀರುವ ಪರಿಣಾಮ ವೈಜ್ಞಾನಿಕವಾಗಿಯೂ ದೃಢಪಟ್ಟಿದೆ.) ಈ ಚಲನೆಯನ್ನು ಆಧರಿಸಿ ಶುಭ - ಅಶುಭ, ರಿಕ್ತ ತಿಥಿಗಳು ಎಂಬ ವಿಶ್ಲೇಷಣೆಯನ್ನು ನಮ್ಮ ಹಿರಿಯರು ಮಾಡಿದ್ದಾರೆ. ವಾಸ್ತವವಾಗಿ ದಿನ ನಿರ್ಧರಣೆಯನ್ನು ನಕ್ಷತ್ರದಿಂದ ಮಾತ್ರ ಮಾಡುವುದು ವ್ಯಾವಹಾರಿಕವಾಗಿ ಸರಿಯಲ್ಲ ಎಂದು ಮನಗಂಡ ನಮ್ಮ ಪೂರ್ವಿಕರು, ಚಂದ್ರನ ವೃದ್ಧಿಕ್ಷಯಗಳನ್ನು ಸೂಚಿಸುವ ತಿಥಿಗಳಿಂದಲೂ ದಿನವನ್ನು ನಿರ್ಧರಿಸುವ ಮಾರ್ಗ ಕಂಡುಕೊಂಡರು. ಅಮಾವಾಸ್ಯೆ, ಹುಣ್ಣಿಮೆಯ ಲೆಕ್ಕಾಚಾರದ ಮೇಲೆ ಮಾಸದಲ್ಲಿ ಎರಡು ಪಕ್ಷ ನಿರ್ಧರಿಸಿ ಪಾಡ್ಯ, ಬಿದಿಗೆ, ತದಿಗೆ, ಚೌತಿ, ಪಂಚಮಿ, ಷಷ್ಠಿ, ಸಪ್ತಮಿ, ಅಷ್ಟಮಿ, ನವಮಿ, ದಶಮಿ, ಏಕಾದಶಿ, ದ್ವಾದಶಿ, ಚತುರ್ದಶಿ, ಹುಣ್ಣಿಮೆ ಅಥವಾ ಅಮಾವಾಸ್ಯೆ ಎಂಬ 15 ತಿಥಿಗಳನ್ನೂ ಗುರಿತಿಸಿದರು.
ವಾರ : ವಾರಗಳು ಎಂದರೆ ಭೂಮಿ ತನ್ನ ಅಕ್ಷದ ಸುತ್ತ ಸುತ್ತು ಹಾಕುವ 7 ಅವಧಿ. (24 ಗಂಟೆ x 7 ದಿನ) ಈ ಚಲನೆ 7 ದಿನಕ್ಕೊಮ್ಮೆ ಪುನರಾವರ್ತನೆ ಆಗುವುದರಿಂದ ಇವುಗಳನ್ನು 7 ಗ್ರಹಗಳು ಎಂದು ಗುರುತಿಸಲಾಗಿದೆ. ಖಗೋಳ ವಿಜ್ಞಾನಿಗಳು ಸೂರ್ಯಇನನ್ನು ನಕ್ಷತ್ರ ಎಂದರೆ, ನಮ್ಮ ಋಷಿ ಮುನಿಗಳು, ಪಂಚಾಂಗಕರ್ತರು ಹಾಗೂ ಜ್ಯೋತಿಷಿಗಳು ಸೂರ್ಯನನನ್ನೂ ಒಂದು ಗ್ರಹ ಎಂದು ಪರಿಗಣಿಸಿದ್ದಾರೆ. ಅವರ ಪ್ರಕಾರ ನವಗ್ರಹಗಳ ಪೈಕಿ ಸೂರ್ಯಯನೂ ಒಬ್ಬ. ಹೀಗಾಗೆ ನಮಃಸೂರ್ಯಾ ಯ ಚಂದ್ರಾಯ ಮಂಗಳಾಯ ಬುಧಾಯಚ, ಗುರು ಶುಕ್ರ ಶನಿ ಭ್ರಶ್ಚ, ರಾಹುವೇ ಕೇತುವೇ ನಮಃ ಎಂಬು ಶ್ಲೋಕವೂ ಹುಟ್ಟಿರುವುದು. ಆ ಪ್ರಕಾರವಾಗಿ ಏಳು ದಿನಗಳಲ್ಲಿ ರವಿವಾರ, ಸೋಮ (ಚಂದ್ರ) ವಾರ, ಮಂಗಳವಾರ, ಬುಧವಾರ, ಗುರುವಾರ, ಶುಕ್ರವಾರ ಹಾಗೂ ಶನಿವಾರ ಎಂದು ಗುರುತಿಸಲಾಗಿದೆ. ಗ್ರಹಗಳ ಹೆಸರಿನ ಮೂಲಕ, ಶುಭ ಹಾಗೂ ಅಶುಭ ದಿನಗಳನ್ನೂ ನಿರ್ಧರಿಸಲಾಗಿದೆ. ರೋಮನ್ನರು ಕೂಡ ಹಿಂದೂ ಪಂಚಾಗದ ರೀತಿಯೇ ತಮ್ಮ ಕ್ಯಾಲೆಂಡರ್ ರಚಿಸಿದ್ದಾರೆ ಎಂದರೆ ಅತಿಶಯೋಕ್ತಿಯೇನಲ್ಲ. ತಜ್ಞರ ಪ್ರಕಾರ ವಾರದ ಬಳಕೆ ಕ್ರಿ.ಶ. 4ನೇ ಶತಮಾನಕ್ಕೆ ಮೊದಲು ಭಾರತದಲ್ಲಿ ಬಳಕೆಯಲ್ಲಿರಲಿಲ್ಲ. ವೇದಗಳ ಕಾಲದಲ್ಲಿ ಆರು ದಿವಸಗಳ ವಾರ ಪ್ರಚಾರದಲ್ಲಿತ್ತು ಎಂದೂ ಹೇಳುತ್ತಾರೆ.
ಯೋಗ : ಸೂರ್ಯಿ ಚಂದ್ರರಿಬ್ಬರು 13 ಡಿಗ್ರಿ ಮತ್ತು 20 ಡಿಗ್ರಿ ಅಂತರಕ್ಕೆ ಬರುವುದನ್ನು ಯೋಗ ಎನ್ನುತ್ತಾರೆ. ಇನ್ನೂ ಹೆಚ್ಚು ವೈಜ್ಞಾನಿಕವಾಗಿ ಹೇಳುವುದಾದರೆ ಸೂರ್ಯಚಂದ್ರರ ರೇಖಾಂಶಾಂತರ ತಿಥಿಯನ್ನು ನಿರ್ಣಯಿಸುವುದೇ ಯೋಗ. ಹಾಗೆಯೆ ಸೂರ್ಯಚಂದ್ರರ ರೇಖಾಂಶಗಳ ಮೊತ್ತ ಯೋಗವನ್ನು ನಿರ್ಣಯಿಸುತ್ತದೆ. ಇದಕ್ಕೆ ಅಶ್ವಿನಿ ಮೂಲಬಿಂದುವಾಗಿರುತ್ತದೆ. ಸೂರ್ಯನ ರೇಖಾಂಶ ಮತ್ತು ಚಂದ್ರನ ರೇಖಾಂಶಗಳ ಈ ಯೋಗದಲ್ಲಿ ಸೂರ್ಯಕ ಚಂದ್ರರ ಚಲನೆ ಆಧರಿಸಿ 27 ಯೋಗಗಳನ್ನು ಹಾಗೂ ಸೂರ್ಯಶಚಂದ್ರರ ಚಲನೆಯ ವ್ಯತ್ಯಾಸ ಅರಿಯಲಾಗಿದೆ. ಇದು ಗ್ರಹಣ ಮೊದಲಾದ ವಿಷಯಗಳನ್ನು ಖಚಿತವಾಗಿ ಹೇಳಲು ನೆರವಾಗುತ್ತದೆ.
ಕರಣ : ಕರಣ ಎಂಬುದು ಒಂದು ದಿನದ ಅರ್ಧಭಾಗದಲ್ಲಿ ಸೂರ್ಯದ ಚಂದ್ರರ ನಡುವೆ ಇರುವ ದೂರದ ಪ್ರಮಾಣ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಚಂದ್ರಸೂರ್ಯರ ರೇಖಾಂಶಾಂತರ 60 ಆಗುವ ಅವಧಿಯೇ ಕರಣ. ಹೀಗಾಗಿ ಕರಣ ಕೂಡ ಸೂರ್ಯಶ ಚಂದ್ರರ ಚಲನೆಯನ್ನು ಅರ್ಥೈಸುವ ಮಾನದಂಡಗಳಲ್ಲೊಂದಾಗಿದೆ. ಕಾಲ ದೇಶಕ್ಕೆ ಅನುಗುಣವಾಗಿ ಪಂಚಾಂಗಗಳಿವೆ. ಉತ್ತರ ಭಾರತದಲ್ಲಿ ವಿಕ್ರಮ ಶಕೆಯ ರೀತ್ಯ ಕಾಲ ಗಣನೆ ಮಾಡುತ್ತಾರೆ. ವಿಕ್ರಮ ಶಕೆಯ ಆರಂಭದ ದಿನವಾದ ಕಾರ್ತೀಕ ಶುಕ್ಲ ಪಾಡ್ಯದಿಂದ (ದೀಪಾವಳಿ) ಉತ್ತರ ಭಾರತೀಯರಿಗೆ ಹೊಸವರ್ಷದ ದಿನ. ಆದರೆ, ದಕ್ಷಿಣ ಭಾರತೀಯರು ವಿಕ್ರಮಾದಿತ್ಯನನ್ನು ಶಾಲಿವಾಹನನು ಸಂಹರಿಸಿದ ದಿನದಿಂದ ಕಾಲಗಣನೆ ಆರಂಭಿಸುತ್ತಾರೆ. ಆದ್ದರಿಂದ ಶಾಲಿವಾಹನ ಶಕೆಯಲ್ಲಿ ಚೈತ್ರ ಶುಕ್ಲ ಪಾಡ್ಯವೇ ಪ್ರಥಮದಿನ. ಚೈತ್ರ ಮಾಸದ ಪೌರ್ಣಿಯ ದಿನ ಚಂದ್ರನು ಚಿತ್ತಾನಕ್ಷತ್ರದಲ್ಲಿ ಇರುವ ಕಾರಣ ಈ ಮಾಸಕ್ಕೆ ಚೈತ್ರ ಮಾಸ ಎಂದು ಹೆಸರು ಬಂದಿದೆ. ಅದೇ ರೀತಿ ದ್ವಾದಶ ರಾಶಿಗಳನ್ನು ಆಧರಿಸಿ 12 ತಿಂಗಳನ್ನು ನಿರ್ಧರಿಸಲಾಗಿದೆ. ಸೂರ್ಯೀನು ತನ್ನ ಉಪ ಗೋಚರ ವಾರ್ಷಿಕ ಚಲನೆಯಲ್ಲಿ ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ.. ಇತ್ಯಾದಿ ದ್ವಾದಶ ರಾಶಿಗಳನ್ನು ಪ್ರವೇಶಿಸುವ ಕ್ಷಣಗಳನ್ನು ಆಯಾ ರಾಶಿಗಳ ಸಂಕ್ರಮಣವೆಂದೂ ಅರ್ಥೈಸಲಾಗುತ್ತದೆ.
ಇಷ್ಟೆಲ್ಲಾ ಹೇಳಿದ ಮೇಲೆ ಪಂಚಾಂಗದ ಭಾಗವಲ್ಲದಿದ್ದರೂ ಈ ಐದನ್ನೂ ಒಳಗೊಂಡ ವರ್ಷದ ಬಗ್ಗೆಯೂ ಹೇಳಲೇಬೇಕು. ನಮ್ಮ ಪೂರ್ವಿಕರು ಈಗಿನ ಇಸವಿ ಪದ್ಧತಿ ಜಾರಿಗೆ ಬರುವ ಮುನ್ನವೇ ನಮ್ಮ 12 ತಿಂಗಳ ಅವಧಿಯನ್ನು ವರ್ಷ ಎಂದು ಪರಿಗಣಿಸಿ ಒಂದೊಂದಕ್ಕೆ ಒಂದೊಂದು ಹೆಸರಿಟ್ಟಿದ್ದರು.
ಅದನ್ನು ಪ್ರಭವ, ವಿಭವ, ಶುಕ್ಲ, ಪ್ರಮೋದೂತ, ಪ್ರಜೋತ್ಪತ್ತಿ, ಆಂಗೀರಸ, ಶ್ರೀಮುಖ, ಭಾವ, ಯುವ, ಧಾತ್ರಿ, ಈಶ್ವರ, ಬಹುಧಾನ್ಯ, ಪ್ರಮಾಥಿ, ವಿಕ್ರಮ, ವೃಷ (ವಿಷು), ಚಿತ್ರಭಾನು, ಸ್ವಭಾನು, ತಾರಣ, ಪಾರ್ಥಿವ, ವ್ಯಯ, ಸರ್ವಜಿತ್, ಸರ್ವಧಾರಿ, ವಿರೋಧಿ, ವಿಕೃತ, ಖರ, ನಂದನ, ವಿಜಯ, ಜಯ, ಮನ್ಮಥ, ದುರ್ಮುಖಿ, ಹೇ ವಿಳಂಬಿ, ವಿಳಂಬಿ, ವಿಕಾರಿ, ಶಾರ್ವರಿ, ಪ್ಲವ, ಶುಭಕೃತ್, ಶೋಭಕೃತ್ , ಕ್ರೋಧಿ, ವಿಶ್ವಾವಸು, ಪರಾಭವ, ಪ್ಲವಂಗ, ಕೀಲಕ, ಸೌಮ್ಯ, ಸಾಧಾರಣ, ವಿರೋಧಿಕೃತ್, ಪರಿಧಾವಿ, ಪ್ರಮಾಧಿ, ಆನಂದ, ರಾಕ್ಷಸ, ನಳ, ಪೈಂಗಳ(ಪಿಂಗಳ), ಕಾಳಯುಕ್ತಿ, ಸಿದ್ಧಾರ್ಥಿ, ರುದ್ರ (ರೌದ್ರಿ), ದುರ್ಮತಿ, ದುಂದುಭಿ, ರುಧಿರೋದ್ಗಾರಿ, ರಕ್ತಾಕ್ಷಿ, ಕ್ರೋಧನ ಹಾಗೂ ಅಕ್ಷಯ (ಕ್ಷಯ). 60 ವರ್ಷಗಳ ಬಳಿಕ ಮತ್ತೆ ಪ್ರಭವದಿಂದ ಆರಂಭವಾಗುತ್ತದೆ.
ಒಟ್ಟಾರೆಯಾಗಿ ಪಂಚಾಗ ನಮ್ಮ ಪೂರ್ವಿಕರು ಸಂಶೋಧಿಸಿದ ವೈಜ್ಞಾನಿಕ ಕಾಲ ನಿರ್ಣಯ. (ಈ ಲೇಖನ ಬರೆಯಲು ಹಲವು ಗ್ರಂಥಗಳನ್ನು ಆಕರವಾಗಿ ಪರಿಗಣಿಸಲಾಗಿದೆ).🙏..✍...