ಪಾಲ್ಗಡಲಲಿ ಪುಟ್ಟಿ, ರಮೆಯನು ಸೋದರಿಯಾಗಿ ಪಡೆದು ಭುವಿಯ ನಭೋಮಂಡಲಕೆ ಶೋಭೆ ತಂದ ಹಗ್ಗಳಿಕೆಯ ಸುರನೆಂಬ ಪರಿಯನೇ...
ಸುರರ ಸುಧೆಯನು ಕದ್ದು ಕುಡಿದ ದೈತ್ಯಕಳ್ಳರನ್ನು ಹಿಡಿದುಕೊಟ್ಟ ನೀನು, ನಿನ್ನ ಗುರು ಪತ್ನಿಯನ್ನೇ ಮೋಹಿಸಿ, ಕಳ್ಳತನದಿ ಅಪಹರಿಸಿ ಕಳನಾಯಕನಾದ ಪರಿಯನೇ....
ಗುರು ಪತ್ನಿಯನು ಮೋಹಿಸಿ, ಅಪಹರಿಸಿದಲ್ಲದೇ ಅವಳ ರಮಿಸಿ ಅವಳಿಗೊಂದು ಬುಧನನೆಂಭೋ ಕೂಸನಿತ್ತು, ಗುರುವಿಗೆ ತನ್ನ ಪತ್ನಿಯ ಹಿಂತಿರುಗಿಸಿದ ಪರಿಯನೇ..
ಹೊರ ಜಗತ್ತಿಗೆ ನೋಟ ಮಾತ್ರದಲ್ಲಿ ಆಕರ್ಷಿಸುವ ಅಂದ ಹೊಂದಿದ್ದು, ಚಾರಿತ್ರ್ಯ ಹೀನ ಕಾರ್ಯಗಳ ಮಾಡಿ, ಕರಾಳ ಗೋಮುಖ ವ್ಯಾಘ್ರನಂತೆ ನಡೆದುಕೊಂಡ ಪರಿಯನೇ...
ಬಿದಿಗೆಯ ಸುಂದರ ಚಂದ್ರನಾಗಿ ಚಂದ್ರಶೇಖರನ ಜಟೆಯ ಅಲಂಕರಿಸಿ, ನಿನ್ನ ಅಸ್ತಿತ್ವದಿಂದ ಪರಶಿವನ ಅಂದಕೆ ಶೋಭೆ ತಂದ ಪರಿಯನೇ...
ಬಾಲ ಶ್ರೀರಾಮನಿಗೆ ಸುಂದರವಾದ ಬೆಳ್ಳಿಯ ಆಟಿಕೆ ಎಂಬ ಆಸೆ ಹುಟ್ಟಿಸಿ ಮುದ್ದು ಮಗುವಿಗೆ ನೀನೊಬ್ಬ ಆಟಿಕೆಯ ವಸ್ತು ಎಂದು ನಂಬಿಸಿ, ಮುಗ್ಧ ಮನದೊಂದಿಗೆ ಚೆಲ್ಲಾಟವಾಡುವ ಪರಿಯನೇ.....
ಒಡಹುಟ್ಟಿದ ಸಹೋದರಂತೆ ನಂಬಿದ ತಾಯಂದಿರು, ತನ್ನ ಮಕ್ಕಳಿಗೆ ಚಂದಮಾಮನೆಂದು ನಿನ್ನ ತೋರುತ ಪರಿಚಯಿಸಿ, ಮೈ ಮರೆಸಿ ಉಣಿಸಿ, ಮಕ್ಕಳ ತಣಿಸುವ... ಅವರ ಮುಗ್ದ ಮನಕೆ ಮುದ ನೀಡುವ ಪರಿಯನೇ...
ಹಗಲಿನಲಿ ಇನನ ಬೇಗೆಯನು ಹೀರಿ, ಸುಟ್ಟು ಸುಣ್ಣವಾದರೂ, ಕಾಣದ ನಿಷೆಯಲಿ ಬೆಳಕು ಚೆಲ್ಲಿ ಇಳೆಗೆ ತಂಪನೆರೆದು,... ತಾನು ಸುಟ್ಟರೂ ಪರರಿಗೆ ತಂಪನೆರೆದು ಕಾಂತಿಯ ದಾರಿದೀಪವಾಗುವ ಪರಿಯನೇ...
ಪೌರ್ಣಮಿಯ ದಿನದಂದು ಸಾಗರದಲೆಗಳ ಹುರಿದುಂಬಿಸಿ ಉಬ್ಬಿಸಿ ಪಯಣಿಗರಲ್ಲಿ ಜೀವಭಯವ ಹುಟ್ಟಿಸಿ ಕಾಡುವ ಪರಿಯನೇ...
ಹುಲು ಮಾನವರಾದ ನಮ್ಮ ಮನೋ ಚಂಚಲೆತೆಗೆ ಕಾರಣೀಭೂತನಾಗಿ, ಇನ್ನೊಬ್ಬರ ಮನಸ್ಸಿನೊಂದಿಗೆ ಚಲ್ಲಾಟವಾಡುವ ಪರಿಯನೇ...
ನಿನ್ನ ನೋಡುತ ಕಾಲಹರಣ ಮಾಡುವ ಪ್ರೇಮಿಗಳ ಮನಸನ್ನ ಸೂರೆಗೊಂಡು, ಇಲ್ಲದ ಉದ್ವೇಗಗಳನು ಅವರ ಮನದಲಿ ಹುಟ್ಟಿಸಿ ಮನೆ ಮಠ ಮರೆಯುವಂತೆ ಸಮ್ಮೋಹನ ಮಾಡುವ ಪರಿಯನೇ....
ತನಗೆ ಸುಂದರ ವದನವಿದೆ ಎಂದು ಗಣಪನ ದೇಹಾಕೃತಿಯ ನೋಡಿ ಹಂಗಿಸಿ ಶಾಪವ ಹೊಂದಿ ಕಳೆಗುಂದಿ ಇನ್ನೊಬ್ಬರ ಹೀಯಾಳಿಸಬಾರದೆಂಬ ಪಾಠ ಕಲಿತ ಪರಿಯನೇ...
ಭಾದ್ರಪದ ಶುಕ್ಲ ಚೌತಿಯ ದಿನದಂದು ನಿನ್ನ ದರ್ಶನ ಮಾತ್ರಕ್ಕೆ ಶಮಂತಕ ಮಣಿ ಕದ್ದ ಕೊಲೆಗಾರನೆಂಬ ಆರೋಪ ಹೊತ್ತು ಶ್ರೀ ವೇಣುಗೋಪಾಲನನ್ನೇ ಬಿಡದೆ ಕಾಡಿ ದುರ್ವಿಧಿಯನಿತ್ತು, ಕಳಾವಂತ ಕಳಾಹೀನನಾಗಿ, ನಿನ್ನ ಮುಖದರ್ಶನವೇ ಬೇಡವೆಂದು ಎಲ್ಲರೂ ತಲೆತಗ್ಗಿಸಿ ಕೊಳ್ಳುವಂತೆ ಬಾಳಿದ ಪರಿಯನೇ...
.....ಹೇಳು ಚಂದ್ರಮಾ,... ಏನ ಕಲಿಯಲಿ ನಿನ್ನಲಿ....
✍️ ವಿಡಂಬನೆ
ಇಲ್ಲದ ಉತ್ಪ್ರೇಕ್ಷೆ, ಆಡಂಬರ ಸಹಿಸನೀ ವೇಣುಗೋಪಾಲನು.