Popular Posts

Thursday, 30 January 2020

ಶ್ರೀಕೃಷ್ಣ ಮತ್ತು ಕರ್ಣ

ಶ್ರೀಕೃಷ್ಣ ಕರ್ಣನಿಗೆ ಹೇಳಿದ ಮೈ ಜುಮ್ಮೆನ್ನುವ ಇದೊಂದು ಮಾತು ಕೇಳಿ ಸಾಕು..

ನಿಮ್ಮ ಜೀವನದಲ್ಲಿ ಕಷ್ಟ ಎಂಬುದೇ ಇರುವುದಿಲ್ಲ..    

ಕಷ್ಟ ಯಾರ ಜೀವನದಲ್ಲಿ‌ ಇಲ್ಲ ಹೇಳಿ.. ಆದರೆ ಕಷ್ಟಗಳನ್ನು ಕಷ್ಟ ಎಂದುಕೊಳ್ಳುವುದೇ ದೊಡ್ಡ ತಪ್ಪು.. 

ಕರ್ಣ ತನ್ನ ಕಷ್ಟಗಳನ್ನು ಕೃಷ್ಣನಿಗೆ ಹೇಳಿಕೊಂಡಾಗ.. 

ಕೃಷ್ಣ ಕರ್ಣನಿಗೆ ಹೇಳಿದ ಈ ಅದ್ಭುತ ಮಾತುಗಳನ್ನು ಕೇಳಿ..     

 ಅಂದು ಕರ್ಣ ಕೃಷ್ಣನಿಗೆ ಹೇಳಿದ, 
“ನನ್ನ ಬದುಕೇ ಒಂದು ಅಗ್ನಿಕುಂಡ. ಮುಳ್ಳಿನ ಬೇಲಿ. ನಾನು ಹುಟ್ಟಿದೆನೇನೋ ಸರಿ, ಆದರೆ ಎಂಥ ಹುಟ್ಟು ! ಹುಟ್ಟಿಸಿದ ಕುಂತಿ ನವಜಾತ ಶಿಶುವಾಗಿದ್ದ ನನ್ನನ್ನು ನದಿಯಲ್ಲಿ ತೇಲಿಬಿಟ್ಟಳು. ಹುಟ್ಟಿ ಕಣ್ಣು ಬಿಡುವುದಕ್ಕೂ ಮುನ್ನ ನಾನು ವಿಶಾಲ ನೀರಿನ ನಡು ಭಾಗದಲ್ಲಿ ತೇಲುತ್ತಿದ್ದೆ.! ಹೇಳು, ಅಕ್ರಮ ಸಂತಾನವಾಗಿ, ತಾಯಿಯ ಕೂತುಹಲದ ಪರೀಕ್ಷೆಗಾಗಿ,ಹುಟ್ಟಿದ್ದು ನನ್ನ ತಪ್ಪೆ ? ”.    

 “ಹುಟ್ಟಿ ಬಡಬಗ್ಗರ ಹಟ್ಟಿಯಲ್ಲಿ ಬೆಳೆದೆ. ಬಿಲ್ವಿದ್ಯೆ ಕಲಿಯಬೇಕೆಂದು ದ್ರೋಣಾಚಾರ್ಯರ ಬಳಿ ಬಂದಾಗ ನನ್ನನ್ನು ಇದಿರುಗೊಂಡಿದ್ದೇನು ? ನಿರಾಸೆ ! ನೀನು ಕ್ಷತ್ರಿಯನಲ್ಲ ! ಕೀಳುಜಾತಿಯಲ್ಲಿ ಹುಟ್ಟಿದ ಸೂತಪುತ್ರ ! ದೂರವಿರು ! ಎಂಬ ಮನ ನೋಯಿಸುವ ಮಾತುಗಳು ! ಸರಿ, ಪರಶುರಾಮರು ಅಸ್ತ್ರಶಸ್ತ್ರಗಳ ವಿದ್ಯೆಯನ್ನೇನೋ ಕಲಿಸಿದರು. ಆದರೆ ನಾನು ಕ್ಷತ್ರಿಯ ಎಂಬುದು ಗೊತ್ತಾಗುತ್ತಲೇ, ಶಾಪ ಕೊಟ್ಟೇಬಿಟ್ಟರು. ಅಗತ್ಯ ಬಿದ್ದಾಗ ನಿನಗೆ ಅಸ್ತ್ರಗಳು ಕೈ ಕೊಡಲಿ ! ಅಬ್ಟಾ ಅದೆಂಥ ಉಗ್ರ ಶಾಪ ! *ಅಗತ್ಯ ಸಂದರ್ಭದಲ್ಲಿ ಮಾತ್ರ ವಿದ್ಯೆ ಕೈ ಕೊಡುವುದಾದರೆ, ಅಂಥ ವಿದ್ಯೆಯನ್ನಾದರೂ ನಾನು ಯಾಕೆ ಸಂಪಾದಿಸಬೇಕಿತ್ತು?* ಹಣದ ಅವಶ್ಯಕತೆ ಬಿದ್ದಾಗ ಒಂದೇ ಒಂದು ದಮ್ಮಡಿಯೂ ಉಳಿಯದಂತೆ, ಆಗಿಹೋಗಲಿ ಎಂಬಂಥ ಶಾಪವಲ್ಲವೆ ಅದು ? ”.

“ ನನ್ನ ಬದುಕಿನ ದುರಂತಗಳ ಸರಮಾಲೆ ಇನ್ನು ಮುಗಿಯಲಿಲ್ಲ ಕೃಷ್ಣ ದ್ರೌಪದಿಯ ಸ್ವಯಂವರದಲ್ಲಿ, ಅದೆಂಥ ಕಡು ಅವಮಾನವನ್ನು ನಾನಂದು ನುಂಗಬೇಕಾಗಿ,ಬಂತೆಂಬುದು ಎಲ್ಲರಿಗೆ ಗೊತ್ತಿದೆ. ಕೌರವ ಪಾಂಡವರ ನಡುವೆ ಯುದ್ಧವೇರ್ಪಟ್ಟಾಗ ಕುಂತಿ, ನನ್ನ ತಾಯಿ, ಬಂದಳು. ತೊಟ್ಟ ಅಸ್ತ್ರವನ್ನು ಮತ್ತೆ ತೊಡೆನೆಂಬ ಮಾತು ಪಡೆದು ಹೋದಳು. ಮಾತಿನುದ್ದಕ್ಕೂ ಪಾಂಡವರನ್ನು ರಕ್ಷಿಸುವ ಹೊಣೆಯನ್ನು ನನ್ನ ಮೇಲೆ ಹೊರಿಸಿದಳೇ ಹೊರತು ಒಮ್ಮೆಯಾದರೂ, ಬಾಯ ಮಾತಿಗಾದರೂ ಯುದ್ಧದಲ್ಲಿ ಗೆದ್ದು ಬಾ ಎಂದು ಸ್ವಂತ ತಾಯಿ ಹರಸಲಿಲ್ಲ !ಇನ್ನೊಬ್ಬ – ಇಂದ್ರ, ನನ್ನ ಕರ್ಣಕುಂಡಲಗಳನ್ನು ಕದಿಯುವುದಕ್ಕೆಂದೆ, ಬಂದ. ಇಷ್ಟೆಲ್ಲ ದೌರ್ಭಾಗ್ಯಗಳ ಮಧ್ಯೆ, ನನ್ನನ್ನು ಕೊನೆಯವರೆಗೆ, ಕೈಹಿಡಿದದ್ದು ದುರ್ಯೋಧನ ಮಾತ್ರ. ಹಾಗಿರುವಾಗ ಆತನನ್ನು ನಾನು ಹೇಗೆ ಮುರಿಯಲಿ ಕೃಷ್ಣ? ಅವನ ಪರವಾಗಿ ನಿಲ್ಲುವುದು ಅಧರ್ಮ ಹೇಗಾದೀತು? ” ನೀನೆ ಹೇಳು. 

ಆಗ ಕರ್ಣನಿಗೆ ಕೃಷ್ಣ ನಗುತ್ತಾ ಹೇಳಿದ, 
" ನೀನು ನದಿ ತೀರದಲ್ಲಿ ಹುಟ್ಟಿದೆ, ನದಿಯ ಪಾಲಾದೆ, ಅಲ್ಲವೆ ? ನಾನು ಹುಟ್ಟಿದ್ದು ಎಲ್ಲಿ ಎಂದು ಕೇಳು ! ಸೆರೆಮನೆಯಲ್ಲಿ !! ಇಂಥ ಜನ್ಮವನ್ನು ಯಾರಾದರೂ ಬಯಸಲು ಸಾಧ್ಯವೇ ?
ಹುಟ್ಟಿದ ಮರುಕ್ಷಣವೇ, ನಾನು ನನ್ನ ತಾಯಿಯಿಂದ ಬೇರೆಯಾದೆ. ನನ್ನ ತಂದೆ ನನ್ನನ್ನು ದೂರದೊಂದು ಹಳ್ಳಿಗೆ, ಬಿಟ್ಟು ಬಂದರು. ಹೋಗುವ ದಾರಿಯುದ್ದಕ್ಕೂ ಮಳೆ, ಗಾಳಿ, ಸಿಡಿಲು. ಅಂದು ಸಾವು ನನ್ನ ಕಣ್ಮುಂದೆ ಇತ್ತು.             ನೀನಾದರೋ ಚಿಕ್ಕವನಿದ್ದಾಗಿನಿಂದ ಕತ್ತಿ, ರಥ, ಕುದುರೆ, ಬಿಲ್ಲುಬಾಣಗಳಿತ್ಯಾದಿಯನ್ನು ನೋಡಿಕೊಂಡು ಬಂದವನು ಕರ್ಣ. ಆದರೆ, ನನ್ನ ಬಾಲ್ಯದಲ್ಲಿ ಏನಿತ್ತು ? ಹಸು, ಕೊಟ್ಟಿಗೆ, ಸೆಗಣಿ, ಗಂಜಲ ! ಹಸು ಮೇಯಿಸುತ್ತ, ಸೆಗಣಿ ಬಾಚುತ್ತ, ಇದೇ ಜೀವನವೆಂದು ಬಗೆದ ಜನರೊಂದಿಗೆ ಬಾಳುತ್ತಿದ್ದವನು ನಾನು. ಅಷ್ಟರಮೇಲೂ, ಅನಿಷ್ಟಕ್ಕೆಲ್ಲ ನಾನೇ ಕಾರಣ ಎಂದು ಜನ ನನ್ನನ್ನು ಬೆಟ್ಟು ಮಾಡುತ್ತಿದ್ದರು. ನನ್ನನ್ನು ಕೊಲ್ಲಲು ಅದೆಷ್ಟು ಪ್ರಯತ್ನಗಳಾದವು ಹೇಳು, ರಾಕ್ಷಸರು ಅದೆಷ್ಟೆಲ್ಲ ಬಗೆಯಲ್ಲಿ ನನ್ನ ಮೇಲೆ ಆಕ್ರಮಣ ಮಾಡಿದರು.  

“ ನಾನೂ ಓದಬೇಕು, ವಿದ್ಯೆ ಸಂಪಾದಿಸಬೇಕು ಎಂದು ನಿರ್ಧರಿಸಿ ಗುರುಕುಲ ಸೇರುವ ಹೊತ್ತಿಗೆ, ನನಗೆ ಹದಿನಾರು ವರ್ಷಗಳಾಗಿಬಿಟ್ಟಿದ್ದವು. ಬಾಕಿ ಹುಡುಗರು ಅದಾಗಲೇ ತಮ್ಮ ಜ್ಞಾನಾರ್ಜನೆ ಮುಗಿಸಿ,ಆಶ್ರಮದಿಂದ ಹೊರಬರುವ ಹೊತ್ತಿನಲ್ಲಿ, ನಾನು ವಿದ್ಯಾರ್ಥಿಯಾಗಿ ಸೇರಿದ್ದೆ. ಇನ್ನು ಗೃಹಸ್ಥ ಜೀವನ ಹೇಗಿತ್ತೆಂದು ಕೇಳುತ್ತೀಯಾ ? ಅದಿನ್ನೊಂದು ಕಥೆ.                   *ಮದುವೆಯಾದವರನ್ನು ನಾನು ಮನಃಪೂರ್ವಕ ಪ್ರೀತಿಸಿರಲಿಲ್ಲ. ಯಾರನ್ನು ನಿಜವಾಗಿ ಪ್ರೀತಿಸಿದ್ದೆನೋ ! ಅವರನ್ನು ಮದುವೆಯಾಗಲಿಲ್ಲ.*
ದೈತ್ಯನೊಬ್ಬ ಕೂಡಿಹಾಕಿದ್ದ ಹೆಂಗಸರನ್ನು ಬಿಡಿಸಿದ್ದರಿಂದ ಅವರೆಲ್ಲರಿಗೂ ನಾನು ಪತಿಯಾದೆ. ಬಯಸದೆ ಬಂದ ಜವಾಬ್ದಾರಿಯದು. ಜರಾಸಂಧನಿಂದ ಜೀವ ಉಳಿಸಲಿಕ್ಕಾಗಿ, ನಾನು ಊರಿನೆಲ್ಲರನ್ನೂ ಹೊರಡಿಸಿಕೊಂಡು ಮಥುರೆಯಿಂದ ದ್ವಾರಕೆಗೆ ಹೋಗಬೇಕಾಯಿತು. ಹೊಸ ಪರಿಸರ, ಹೊಸ ಜನ. ಅಂತಹ ಪರಿಸ್ಥಿತಿಯಲ್ಲಿ ಏನು ಮಾಡಬಹುದಿತ್ತು ಎಂದರೆ ನಾವು ಅಲ್ಲೆ ಇರಬೇಕಾಗಿ ಬಂತು. ಅಲ್ಲಿ ನಾವು ಬಿಡಾರ ಹೂಡಿ, ಹೊಸ ನಗರವನ್ನು ಕಟ್ಟಿಕೊಳ್ಳಬೇಕಾಗಿತ್ತು. ಮಥುರೆಯಿಂದ ಹೊರಟಾಗ ನಾನು ಕೇಳಿದ ಮಾತುಗಳಾದರೂ ಎಂಥಾದ್ದು ! ಹೇಡಿ ಎಂದರು. ರಟ್ಟೆಯಲ್ಲಿ ಬಲವಿಲ್ಲದೆ, ಓಡಿಹೋಗುತ್ತಿದ್ದಾನೆ, ಎಂದರು. ಎಲ್ಲ ಗೇಲಿ, ಅಪಮಾನಗಳನ್ನೂ ಸ್ಥಿತಪ್ರಜ್ಞನಾಗಿ ನಾನು ಸಹಿಸಿಕೊಳ್ಳಬೇಕಾಯಿತು”.       

 " ಕರ್ಣ ! ಕುರುಕ್ಷೇತ್ರದಲ್ಲಿ, ನೀನು ಗೆದ್ದದ್ದೇ ಆದರೆ ಧುರ್ಯೋದನನ ಪ್ರೀತಿಗೆ ನೀನು ಸಂಪೂರ್ಣವಾಗಿ, ಪಾತ್ರನಾಗುತ್ತಿದ್ದೆ ! ಪ್ರೀತಿಯಿಂದ ಅರ್ಧರಾಜ್ಯವನ್ನು, ನಿನಗೆ ಬಿಟ್ಟುಕೊಟ್ಟಾನೇನೋ. ಅಥವಾ ಸಿಂಹಾಸನದ ಪಕ್ಕದಲ್ಲೇ ಮತ್ತೂಂದನ್ನಿಟ್ಟು ನಿನ್ನನ್ನು ಕುಳ್ಳಿರಿಸಿಯಾನೋ ಏನೋ.!

ಜಯದಿಂದ ಲಭಿಸುವ ಎಲ್ಲ ಭೋಗ ಭಾಗ್ಯಗಳಿಗೂ ನೀನು ವಾರಸುದಾರನಾಗಿರುತ್ತಿದ್ದೆ. ಆದರೆ ನನಗೆ ? ಈ ಯುದ್ಧ ಗೆಲ್ಲಿಸಿಕೊಟ್ಟರೆ, ನನಗೇನು ಸಿಗುತ್ತದೆ ಎಂದು ಭಾವಿಸಿದ್ದಿ ? ಅಣ್ಣತಮ್ಮಂದಿರು ಹೇಳುತ್ತಾರೆ – ನಮಗೆ ಬೇಡಿತ್ತು, ಆದರೂ ಆ ಕುಟಿಲ ಈ ಯುದ್ಧ ಮಾಡಿಸಿದ ! ಲಕ್ಷಾಂತರ ಜನರ ಸಾವಿಗೆ ಕಾರಣನಾದ. ದಾಯಾದಿಗಳೇ ಪರಸ್ಪರ ಕೊಂದುಕೊಳ್ಳುವ ಹಾಗೆ ಮಾಡಿದ. ಅಣ್ಣತಮ್ಮಂದಿರು ಎದುರೆದುರು ನಿಂತು ಸೆಣಸುವಂತೆ ಮಾಡಿದ ” ಗಾಂಧರಿಯ ಶಾಪವನ್ನು ನಾನು ಗಾಳಿಗೆ ತೂರಿ ಬಿಡಲಾಗಲಿಲ್ಲಸಹನೆಯಿಂದ ಅನುಭವಿಸಬೇಕಾಯಿತು.

ಕರ್ಣ ! *ಪ್ರತಿಯೊಬ್ಬನಿಗೂ ಜೀವನದಲ್ಲಿ ಒಂದಿಲ್ಲೊಂದು ಸವಾಲು ಇದ್ದೆ ಇರುತ್ತದೆ. ನಿನಗೆ ನಿನ್ನ ಜೀವನ ಅಗ್ನಿಕುಂಡ ಅನ್ನಿಸಿದರೆ ನನ್ನದನ್ನು ನೋಡು. ಜೀವನ ಯಾರಿಗೂ ಹೂವಿನ ಹಾಸಿಗೆಯಲ್ಲ. ಯಾರಿಗೂ ಸುಲಭ ಗ್ರಾಹ್ಯವೂ ಅಲ್ಲ. ಜೀವನದಲ್ಲಿ ಏನೇ ಏರುಪೇರುಗಳು ಬಂದರೂ, ಆ ಎಲ್ಲ ಸಂದರ್ಭಗಳಲ್ಲಿ ನೀನು ಏನನ್ನೇ ಮಾಡಿದರೂ ಯಾವುದು ಸರಿ ಎಂಬುದು ನಿನ್ನ ಒಳ ಮನಸ್ಸಿಗೆ ಗೊತ್ತಿರುತ್ತದೆ. ಅದನ್ನೇ ಧರ್ಮ ಎನ್ನುವುದು*. 

ಆತ್ಮಸಾಕ್ಷಿ ಯಾವುದನ್ನು ನುಡಿಯುತ್ತದೋ ! ಅದೇ ಧರ್ಮ. ಆತ್ಮಸಾಕ್ಷಿ ಸತ್ತ ದಿನ ನಾವು ಧರ್ಮದಿಂದ ವಿಮುಖರಾದೆವು, ಅಧರ್ಮಿಗಳಾದೆವು ಎಂದೇ ಅರ್ಥ.                                     ನಾವು ಎಷ್ಟು ಅನ್ಯಾಯಕ್ಕೊಳಗಾದರೂ ಎಷ್ಟೊಂದು ಅಪಮಾನವನ್ನು ನುಂಗಬೇಕಾಗಿ, ಬಂದರೂ ಎಷ್ಟೊಂದು ಸಲ ಕೆಳಗೆ ಬಿದ್ದರೂ ಮೀಸೆ ಮಣ್ಣಾದರೂ ಮುಖ್ಯವಾಗುವುದು ಯಾವುದು ಗೊತ್ತಾ ?  *ನಾವು ಆ ಪರಿಸ್ಥಿತಿಗಳಿಗೆ ಹೇಗೆ ಪ್ರತಿಕ್ರಿಯಿಸಿದೆವು ಎನ್ನುವುದು. ಜೀವನದಲ್ಲಿ ಮೇಲಿಂದ ಮೇಲೆ ಸಮಸ್ಯೆಗಳು, ದುಃಖಗಳು, ಅವಮಾನಗಳು ಬಂದವೆನ್ನುವುದು ನಾವು ತಪ್ಪು ಮಾಡಲು ನಮಗೆ ಸಿಗುವ ಪರವಾನಗಿಯಲ್ಲ. ಜೀವನದಲ್ಲಿ, ನಮ್ಮ ಬದುಕು ನಿರ್ಧಾರವಾಗುವುದು ನಾವು ಯಾವ ಚಪ್ಪಲಿಯನ್ನು ತೊಡುತ್ತೇವೆ ಎಂಬುದರಿಂದ ಅಲ್ಲ,*
 
*ಯಾವ ದಾರಿಯಲ್ಲಿ ನಮ್ಮ ಹೆಜ್ಜೆಗಳನ್ನು ಇಡುತ್ತೇವೆ ಎಂಬುದರಿಂದ ಅದನ್ನು ಮೊದಲು ನಾವು ಅರ್ಥ ಮಾಡಿಕೊಳ್ಳಬೇಕು*

ಭಗವಾನ್ ನಾಮ ಸಂಕೀರ್ತನೆ

ದಿನ ನಿತ್ಯ ಸಂಧ್ಯಾ ಕಾಲದಲ್ಲಿ ಭಜನೆ ಮಾಡುವುದರಿಂದ ಪ್ರಯೋಜನ:--

ಸಾಮಾನ್ಯವಾಗಿ ಜನರ ಮನಸ್ಸಿನಲ್ಲಿ 
ಏನಾದರೊಂದು ವಿಚಾರ ನಡೆಯುತ್ತಲೇ ಇರುತ್ತದೆ. ಒಬ್ಬೊಬ್ಬರ ಮನಸ್ಸಿನಲ್ಲಿ ಒಂದೊಂದು ತರಹ ಭಯ,ಚಿಂತೆ,ಅಸೂಯೆ,ಕ್ರೋಧ,ಮದ,ಮಾತ್ಸರ್ಯ,
ಹೀಗೆ ವಿಧ ವಿಧವಾದ ಯೋಚನೆಗಳು.
ಆದರೆ ಅವರೆಲ್ಲರೂ ಒಟ್ಟಿಗೆ ಭಜನೆಯಲ್ಲಿ ಕುಳಿತಾಗ, ಪೂರ್ತಿ ಭಜನೆಯಲ್ಲಿ ಸೇರಿಹೋದಾಗ ಅವರೆಲ್ಲರ ವಿಧ ವಿಧವಾದ ಯೋಚನೆಗಳು ಕರಗಿ ಹೋಗುತ್ತದೆ.ಸೂರ್ಯನೆದುರು ಮಂಜು ಕರಗುವಂತೆ.
ಮತ್ತೂ ಮತ್ತೂ ಪೂರ್ಣವಾಗಿ ಭಜನೆಯಲ್ಲಿ ನೀವು ಸೇರಿಹೋಗುತ್ತಿದ್ದ ಹಾಗೆ ನಿಮ್ಮಲ್ಲಿ ಒಂದು ವಿಧವಾದ ತರಂಗಗಳು ಹೊರಹೊಮ್ಮಲು ಶುರುವಾಗುತ್ತದೆ.ಅವುಗಳೇ ಶಕ್ತಿಯ ತರಂಗಗಳು.ಅವು ನಮ್ಮ ಕಣ್ಣಿಗೆ ಗೋಚರಿಸದಿದ್ದರೂ ಅದರ ಅನುಭವ ನಿಮಗಾಗುತ್ತದೆ.
ಇವುಗಳು ನಿಮಗೆ ಮಾತ್ರ ಆನಂದ ಉಂಟುಮಾಡುವುದಲ್ಲದೆ ನಿಮ್ಮ ಸುತ್ತ ಕುಳಿತವರಿಗೂ ಹರಡುತ್ತವೆ.ಅವರಿಗೂ ಆನಂದದ ಅರಿವಾಗುತ್ತದೆ.ಪ್ರತಿಯೊಬ್ಬರಿಂದಲೂ ಈ ರೀತಿಯ ಶಕ್ತಿ ಅಲೆಗಳು ಹೊರಹೊಮ್ಮಿ ಆ ಭಜನೆಯ ಸ್ಥಳವೇ ಒಂದು ಶಕ್ತಿಯ ಕೇಂದ್ರ ಬಿಂದುವಾಗುತ್ತದೆ.

ಅದಕ್ಕೆ ಹಿಂದಿನವರು ಹೇಳುತ್ತಿದ್ದರು- *ಎಲ್ಲೆಲ್ಲಿ ಸತ್ಸಂಗ,ಭಜನೆ ನಡೆಯುವುದೊ ಅಲ್ಲಿ ಆಂಜನೇಯ ಇರುವನೆಂದು.* ಅಂದರೆ ನಿಮ್ಮ ಭಜನೆಯಿಂದ ದೇವರು ಪ್ರತ್ಯಕ್ಷವಾಗದಿದ್ದರೂ, ನಿಮ್ಮಲ್ಲಿ ದೇವರ ಇರುವಿಕೆಯ ಅನುಭವ ವಾಗುತ್ತದೆ. 

"ಕಲಿಯುಗದಲಿ ಹರಿ ನಾಮವ ನೆನೆದರೆ ಕುಲಕೋಟಿಗಳು ಉದ್ಧರಿಸುವುವು" .. ಎಂದು ಶ್ರೀ ಪುರಂದರ ದಾಸರು ಆದೇಶ ಮಾಡುತ್ತಾರೆ.. ಕಲಿಯುಗದಲ್ಲಿ ಹುಟ್ಟಿ ಬಂದ ಸಜ್ಜನರಿಗೆ ಆಯಸ್ಸು, ಆರೋಗ್ಯ, ಸಾಧನಾ ಸಂಪತ್ತುಗಳೇ ಮೊದಲಾದ ಉಪಕರಣಗಳು ಬಹಳ ಕಡಿಮೆ.. ನಮಗೆ ಕೃತ, ತ್ರೇತಾ,ದ್ವಾಪರ ಯುಗಗಳಲ್ಲಿ ಸಜ್ಜನರು ಮಾಡಿದ ರೀತಿಯಲ್ಲಿ ಧ್ಯಾನ, ತಪಸ್ಸು, ಯಜ್ಞ, ದಾನ ಮುಂತಾದ ಸಾಧನೆಗಳನ್ನು ಪೂರ್ಣತೆಯಿಂದ ಮಾಡುವ ಅವಕಾಶವೂ ಇಲ್ಲ, ಯೋಗ್ಯತೆಯೂ ಇಲ್ಲ.. 

ಆದರೆ ಕರಣಾಸಮುದ್ರನಾದ ಪರಮಾತ್ಮ ಕಲಿಯುಗದ ಸಜ್ಜನರ ಉದ್ಧಾರಕ್ಕಾಗಿ ಒಂದು ಸುಲಭೋಪಾಯವನ್ನು ಗುರು, ದೇವತೆಗಳ ಮುಖಾಂತರ, ಶಾಸ್ರ್ತಗಳ ಮುಖಾಂತರ ಆದೇಶ ಮಾಡಿದ್ದಾನೆ.. 

"ಕಲೌ ಸಂಕೀರ್ತ್ಯ ಕೇಶವಂ" - ಕಲಿಯುಗದಲ್ಲಿ ಭಗವಂತನ ನಾಮ ಸಂಕೀರ್ತನೆಯಿಂದ ಸಾಧನೆಗೆ ಬೇಕಾದ ಸರ್ವ ಪ್ರತಿಬಂಧಕಗಳು ನಾಶವಾಗುತ್ತವೆ.. ಇನ್ನು ಆ ನಾಮ ಸಂಕೀರ್ತನೆಯೇ ಮಹಾ ಸಾಧನೆಯಾಗುತ್ತದೆ.. ನಮ್ಮ ಮನಸ್ಸಿನಲ್ಲಿ ಇರುವ ಪಾಪ ಸಂಸ್ಕಾರಗಳನ್ನು ಬುಡ ಸಮೇತ ಕಿತ್ತು ಹಾಕುವ ಮಹಾ ಸಾಧನ ಎಂದರೆ ಅದು ಶ್ರೀಹರಿ ನಾಮ ಸಂಕೀರ್ತನೆ.. ಮೊದಲು ಪಾಪಗಳ ರಾಶಿಯನ್ನು ಸುಟ್ಟು, ಕ್ರಮೇಣ ಪುಣ್ಯದ ಸಂಪಾದನೆ ಮಾಡಿಸಿ, ಸಜ್ಜನರ ಸಾಂಗತ್ಯವನ್ನು ನೀಡುತ್ತದೆ ಸಂಕೀರ್ತನೆ.. 

ಜ್ಞಾನ, ಭಕ್ತಿ, ವೈರಾಗ್ಯಗಳೇ ಮೊದಲಾದ ಸದ್ಗುಣಗಳ ಜೊತೆಗೂಡಿ ಮಾಡುವ ಭಗವಂತನ ಸ್ಮರಣೆಯಿಂದ ದೇವರು ಪ್ರೀತನಾಗುತ್ತಾನೆ.. ಹೀಗೆ ಪ್ರೀತನಾದ ಸ್ವಾಮಿ ಸಾಧಕರ ಮೇಲೆ ತನ್ನ ಮಹಾ ಪ್ರಸಾದವನ್ನು ಮಾಡುತ್ತಾನೆ.. ಅವನ ಮಹಾ ಪ್ರಸಾದದ ಫಲವೇ ಅಪರೋಕ್ಷ ಜ್ಞಾನ, ಮೋಕ್ಷಗಳು.. 

ಭಜನೆ ಮಾಡುವ ಸಮಯದಲ್ಲಿ ಭಜನೆಯ ಪ್ರತಿಯೊಂದು ಶಬ್ದವನ್ನೂ ಅನುಭವಿಸಿ ಆನಂದಿಸಿ.ಆದರೆ ಭಜನೆ ಚೆನ್ನಾಗಿತ್ತು,ಅದು ಚೆನ್ನಾಗಿಲ್ಲ,ಅವರು ಸರಿಯಾಗಿ ಹಾಡಲಿಲ್ಲ,ಎಂದೆಲ್ಲಾ ಯೋಚಿಸಲು ಹೋಗಬಾರದು.ಯಾವಾಗ ಬೇಕು-ಬೇಡಗಳ ಬಗ್ಗೆ ಚಿಂತಿಸುತ್ತೀರೋ ಕೂಡಲೆ ನಿಮ್ಮ ಶಕ್ತಿ ಇಳಿದುಹೋಗುತ್ತದೆ. ಭಜನೆ ಹೇಗಿದೆಯೋ ಹಾಗೆ ಸ್ವೀಕರಿಸಿ ಅದರೊಂದಿಗೆ ಆನಂದದಿಂದಿರಿ. 
||ರಾಗ ತಾಳ ಹೇಗೇ ಇರಲಿ ದೇವರನಾಮ ಬಾಯಿಗೆ ಬರಲಿ||