Popular Posts

Thursday, 30 January 2020

ಭಗವಾನ್ ನಾಮ ಸಂಕೀರ್ತನೆ

ದಿನ ನಿತ್ಯ ಸಂಧ್ಯಾ ಕಾಲದಲ್ಲಿ ಭಜನೆ ಮಾಡುವುದರಿಂದ ಪ್ರಯೋಜನ:--

ಸಾಮಾನ್ಯವಾಗಿ ಜನರ ಮನಸ್ಸಿನಲ್ಲಿ 
ಏನಾದರೊಂದು ವಿಚಾರ ನಡೆಯುತ್ತಲೇ ಇರುತ್ತದೆ. ಒಬ್ಬೊಬ್ಬರ ಮನಸ್ಸಿನಲ್ಲಿ ಒಂದೊಂದು ತರಹ ಭಯ,ಚಿಂತೆ,ಅಸೂಯೆ,ಕ್ರೋಧ,ಮದ,ಮಾತ್ಸರ್ಯ,
ಹೀಗೆ ವಿಧ ವಿಧವಾದ ಯೋಚನೆಗಳು.
ಆದರೆ ಅವರೆಲ್ಲರೂ ಒಟ್ಟಿಗೆ ಭಜನೆಯಲ್ಲಿ ಕುಳಿತಾಗ, ಪೂರ್ತಿ ಭಜನೆಯಲ್ಲಿ ಸೇರಿಹೋದಾಗ ಅವರೆಲ್ಲರ ವಿಧ ವಿಧವಾದ ಯೋಚನೆಗಳು ಕರಗಿ ಹೋಗುತ್ತದೆ.ಸೂರ್ಯನೆದುರು ಮಂಜು ಕರಗುವಂತೆ.
ಮತ್ತೂ ಮತ್ತೂ ಪೂರ್ಣವಾಗಿ ಭಜನೆಯಲ್ಲಿ ನೀವು ಸೇರಿಹೋಗುತ್ತಿದ್ದ ಹಾಗೆ ನಿಮ್ಮಲ್ಲಿ ಒಂದು ವಿಧವಾದ ತರಂಗಗಳು ಹೊರಹೊಮ್ಮಲು ಶುರುವಾಗುತ್ತದೆ.ಅವುಗಳೇ ಶಕ್ತಿಯ ತರಂಗಗಳು.ಅವು ನಮ್ಮ ಕಣ್ಣಿಗೆ ಗೋಚರಿಸದಿದ್ದರೂ ಅದರ ಅನುಭವ ನಿಮಗಾಗುತ್ತದೆ.
ಇವುಗಳು ನಿಮಗೆ ಮಾತ್ರ ಆನಂದ ಉಂಟುಮಾಡುವುದಲ್ಲದೆ ನಿಮ್ಮ ಸುತ್ತ ಕುಳಿತವರಿಗೂ ಹರಡುತ್ತವೆ.ಅವರಿಗೂ ಆನಂದದ ಅರಿವಾಗುತ್ತದೆ.ಪ್ರತಿಯೊಬ್ಬರಿಂದಲೂ ಈ ರೀತಿಯ ಶಕ್ತಿ ಅಲೆಗಳು ಹೊರಹೊಮ್ಮಿ ಆ ಭಜನೆಯ ಸ್ಥಳವೇ ಒಂದು ಶಕ್ತಿಯ ಕೇಂದ್ರ ಬಿಂದುವಾಗುತ್ತದೆ.

ಅದಕ್ಕೆ ಹಿಂದಿನವರು ಹೇಳುತ್ತಿದ್ದರು- *ಎಲ್ಲೆಲ್ಲಿ ಸತ್ಸಂಗ,ಭಜನೆ ನಡೆಯುವುದೊ ಅಲ್ಲಿ ಆಂಜನೇಯ ಇರುವನೆಂದು.* ಅಂದರೆ ನಿಮ್ಮ ಭಜನೆಯಿಂದ ದೇವರು ಪ್ರತ್ಯಕ್ಷವಾಗದಿದ್ದರೂ, ನಿಮ್ಮಲ್ಲಿ ದೇವರ ಇರುವಿಕೆಯ ಅನುಭವ ವಾಗುತ್ತದೆ. 

"ಕಲಿಯುಗದಲಿ ಹರಿ ನಾಮವ ನೆನೆದರೆ ಕುಲಕೋಟಿಗಳು ಉದ್ಧರಿಸುವುವು" .. ಎಂದು ಶ್ರೀ ಪುರಂದರ ದಾಸರು ಆದೇಶ ಮಾಡುತ್ತಾರೆ.. ಕಲಿಯುಗದಲ್ಲಿ ಹುಟ್ಟಿ ಬಂದ ಸಜ್ಜನರಿಗೆ ಆಯಸ್ಸು, ಆರೋಗ್ಯ, ಸಾಧನಾ ಸಂಪತ್ತುಗಳೇ ಮೊದಲಾದ ಉಪಕರಣಗಳು ಬಹಳ ಕಡಿಮೆ.. ನಮಗೆ ಕೃತ, ತ್ರೇತಾ,ದ್ವಾಪರ ಯುಗಗಳಲ್ಲಿ ಸಜ್ಜನರು ಮಾಡಿದ ರೀತಿಯಲ್ಲಿ ಧ್ಯಾನ, ತಪಸ್ಸು, ಯಜ್ಞ, ದಾನ ಮುಂತಾದ ಸಾಧನೆಗಳನ್ನು ಪೂರ್ಣತೆಯಿಂದ ಮಾಡುವ ಅವಕಾಶವೂ ಇಲ್ಲ, ಯೋಗ್ಯತೆಯೂ ಇಲ್ಲ.. 

ಆದರೆ ಕರಣಾಸಮುದ್ರನಾದ ಪರಮಾತ್ಮ ಕಲಿಯುಗದ ಸಜ್ಜನರ ಉದ್ಧಾರಕ್ಕಾಗಿ ಒಂದು ಸುಲಭೋಪಾಯವನ್ನು ಗುರು, ದೇವತೆಗಳ ಮುಖಾಂತರ, ಶಾಸ್ರ್ತಗಳ ಮುಖಾಂತರ ಆದೇಶ ಮಾಡಿದ್ದಾನೆ.. 

"ಕಲೌ ಸಂಕೀರ್ತ್ಯ ಕೇಶವಂ" - ಕಲಿಯುಗದಲ್ಲಿ ಭಗವಂತನ ನಾಮ ಸಂಕೀರ್ತನೆಯಿಂದ ಸಾಧನೆಗೆ ಬೇಕಾದ ಸರ್ವ ಪ್ರತಿಬಂಧಕಗಳು ನಾಶವಾಗುತ್ತವೆ.. ಇನ್ನು ಆ ನಾಮ ಸಂಕೀರ್ತನೆಯೇ ಮಹಾ ಸಾಧನೆಯಾಗುತ್ತದೆ.. ನಮ್ಮ ಮನಸ್ಸಿನಲ್ಲಿ ಇರುವ ಪಾಪ ಸಂಸ್ಕಾರಗಳನ್ನು ಬುಡ ಸಮೇತ ಕಿತ್ತು ಹಾಕುವ ಮಹಾ ಸಾಧನ ಎಂದರೆ ಅದು ಶ್ರೀಹರಿ ನಾಮ ಸಂಕೀರ್ತನೆ.. ಮೊದಲು ಪಾಪಗಳ ರಾಶಿಯನ್ನು ಸುಟ್ಟು, ಕ್ರಮೇಣ ಪುಣ್ಯದ ಸಂಪಾದನೆ ಮಾಡಿಸಿ, ಸಜ್ಜನರ ಸಾಂಗತ್ಯವನ್ನು ನೀಡುತ್ತದೆ ಸಂಕೀರ್ತನೆ.. 

ಜ್ಞಾನ, ಭಕ್ತಿ, ವೈರಾಗ್ಯಗಳೇ ಮೊದಲಾದ ಸದ್ಗುಣಗಳ ಜೊತೆಗೂಡಿ ಮಾಡುವ ಭಗವಂತನ ಸ್ಮರಣೆಯಿಂದ ದೇವರು ಪ್ರೀತನಾಗುತ್ತಾನೆ.. ಹೀಗೆ ಪ್ರೀತನಾದ ಸ್ವಾಮಿ ಸಾಧಕರ ಮೇಲೆ ತನ್ನ ಮಹಾ ಪ್ರಸಾದವನ್ನು ಮಾಡುತ್ತಾನೆ.. ಅವನ ಮಹಾ ಪ್ರಸಾದದ ಫಲವೇ ಅಪರೋಕ್ಷ ಜ್ಞಾನ, ಮೋಕ್ಷಗಳು.. 

ಭಜನೆ ಮಾಡುವ ಸಮಯದಲ್ಲಿ ಭಜನೆಯ ಪ್ರತಿಯೊಂದು ಶಬ್ದವನ್ನೂ ಅನುಭವಿಸಿ ಆನಂದಿಸಿ.ಆದರೆ ಭಜನೆ ಚೆನ್ನಾಗಿತ್ತು,ಅದು ಚೆನ್ನಾಗಿಲ್ಲ,ಅವರು ಸರಿಯಾಗಿ ಹಾಡಲಿಲ್ಲ,ಎಂದೆಲ್ಲಾ ಯೋಚಿಸಲು ಹೋಗಬಾರದು.ಯಾವಾಗ ಬೇಕು-ಬೇಡಗಳ ಬಗ್ಗೆ ಚಿಂತಿಸುತ್ತೀರೋ ಕೂಡಲೆ ನಿಮ್ಮ ಶಕ್ತಿ ಇಳಿದುಹೋಗುತ್ತದೆ. ಭಜನೆ ಹೇಗಿದೆಯೋ ಹಾಗೆ ಸ್ವೀಕರಿಸಿ ಅದರೊಂದಿಗೆ ಆನಂದದಿಂದಿರಿ. 
||ರಾಗ ತಾಳ ಹೇಗೇ ಇರಲಿ ದೇವರನಾಮ ಬಾಯಿಗೆ ಬರಲಿ||

No comments:

Post a Comment