Popular Posts

Friday, 21 February 2020

ಶಿವ ಶಿವ

*ಶಿವನ ವಿಶ್ರಾಂತಿಯ ಕಾಲ ಎಂದರೇನು?*

ಪ್ರತಿದಿನ ಶಿವನು ರಾತ್ರಿಯ ೪ ಪ್ರಹರಗಳಲ್ಲಿನ ಒಂದು ಪ್ರಹರ ವಿಶ್ರಾಂತಿ ತೆಗೆದುಕೊಳ್ಳುತ್ತಾನೆ. ಶಿವನು ವಿಶ್ರಾಂತಿ ತೆಗೆದುಕೊಳ್ಳುವ ಒಂದು ಪ್ರಹರ ಎಂದರೆ ಭೂಮಿಯ ಮೇಲಿನ ೩ ಗಂಟೆಗಳು (ಅಂದರೆ ದೇವರ ಅರ್ಧ ನಿಮಿಷ). ದೇವರ ಒಂದು ರಾತ್ರಿ ಎಂದರೆ ಭೂಮಿಯ ಮೇಲಿನ ಒಂದು ವರ್ಷ. ಭೂಮಿಯ ಮೇಲೆ ದಿನದಲ್ಲಿ ೪ ಪ್ರಹರಗಳು ಮತ್ತು ರಾತ್ರಿಯಲ್ಲಿ ೪ ಪ್ರಹರಗಳು ಹೀಗೆ ೨೪ ಗಂಟೆಗಳಲ್ಲಿ ಒಟ್ಟು ೮ ಪ್ರಹರಗಳಿವೆ. ಒಂದು ಪ್ರಹರವು ೩ ಗಂಟೆಯದ್ದಾಗಿದೆ.

*ಶಿವನ ಗಾಢ ನಿದ್ರಾವಸ್ಥೆಯ (ಪ್ರದೋಷಕಾಲದ) ಕಾಲದಲ್ಲಿ ಮಾಡಿದ ಉಪಾಸನೆಯ ಲಾಭ*

ಯಾವಾಗ ಶಿವನು ವಿಶ್ರಾಂತಿ ತೆಗೆದುಕೊಳ್ಳುತ್ತಾನೆಯೋ, ಆ ೩೦ ಸೆಕೆಂಡುಗಳಲ್ಲಿಯೂ ಮಧ್ಯದ ಕೆಲವು ಕ್ಷಣ ಶಿವನ ಗಾಢ ನಿದ್ರಾವಸ್ಥೆ (ಸಮಾಧಿ ಅವಸ್ಥೆ) ಇರುತ್ತದೆ. ಅದಕ್ಕೆ ಪ್ರದೋಷ ಅಥವಾ ನಿಷಿದ್ಧಕಾಲ ಎನ್ನುತ್ತಾರೆ. ಭೂಮಿಯ ಮೇಲೆ ಈ ಕಾಲವು ಸಾಧಾರಣ ಒಂದರಿಂದ ಒಂದೂವರೆ ಗಂಟೆಗಳಷ್ಟು ಇರುತ್ತದೆ. ಪ್ರದೋಷ ಕಾಲದಲ್ಲಿ ಯಾವುದೇ ಮಾರ್ಗದಿಂದ, ಯಾವುದೇ ಜ್ಞಾನವಿಲ್ಲದೇ ಅಥವಾ ಗೊತ್ತಿಲ್ಲದೆಯೇ ನಮ್ಮಿಂದ ಶಿವನ ಉಪಾಸನೆಯಾದರೆ ಹಾಗೂ ಮಾಡಿದ ಉಪಾಸನೆಯಲ್ಲಿ ದೋಷವಿದ್ದರೂ ಶೇ. ೧೦೦ ರಷ್ಟು ಫಲ ಸಿಗುತ್ತದೆ. ಈ ವರವನ್ನು ಶಂಕರನೇ ಕೊಟ್ಟಿದ್ದಾನೆ. ಈ ಪ್ರದೋಷ ಕಾಲದಲ್ಲಿ ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಾರೆ. ಪ್ರದೋಷ ಕಾಲದಲ್ಲಿ ಮಾಡುವ ಅಭಿಷೇಕವನ್ನು ‘ಮಹಾ-ಅಭಿಷೇಕ’ ಎನ್ನುತ್ತಾರೆ. ಪ್ರದೋಷ ಕಾಲದಲ್ಲಿ ಶಿವನ ನಾಮಜಪ ಮಾಡುವುದರಿಂದ ಕೆಟ್ಟ ಶಕ್ತಿಗಳ ತೊಂದರೆಯಾಗದಂತೆ ರಕ್ಷಣೆಯಾಗುತ್ತದೆ. ಭಗವಾನ ಶಂಕರನು ರಾತ್ರಿಯ ಒಂದು ಪ್ರಹರ ವಿಶ್ರಾಂತಿ ತೆಗೆದುಕೊಳ್ಳುತ್ತಾನೆ, ಆ ಪ್ರಹರವನ್ನೇ ‘ಮಹಾಶಿವರಾತ್ರಿ’ ಎನ್ನುತ್ತಾರೆ. ಮಹಾಶಿವರಾತ್ರಿಯಂದು ಶಿವನ ಉಪಾಸನೆ ಮಾಡುವ ಶಾಸ್ತ್ರ ಈ ರೀತಿ ಇದೆ. ಶಿವನ ವಿಶ್ರಾಂತಿಯ ಸಮಯದಲ್ಲಿ ಶಿವತತ್ತ್ವದ ಕಾರ್ಯ ನಿಂತು ಹೋಗುತ್ತದೆ ಅಂದರೆ ಆ ಸಮಯದಲ್ಲಿ ಶಿವನು ಧ್ಯಾನಾವಸ್ಥೆಯಿಂದ ಸಮಾಧಿ ಅವಸ್ಥೆಗೆ ಹೋಗುತ್ತಾನೆ. ಶಿವನ ಸಮಾಧಿ ಸ್ಥಿತಿ ಅಂದರೆ ಶಿವನು ತನಗಾಗಿ ಸಾಧನೆ ಮಾಡುವ ಕಾಲ. ಆದುದರಿಂದ ಆ ಕಾಲದಲ್ಲಿ ಶಿವತತ್ತ್ವವು ವಿಶ್ವದಲ್ಲಿನ ಅಥವಾ ಬ್ರಹ್ಮಾಂಡದಲ್ಲಿನ ತಮೋಗುಣವನ್ನು ಸ್ವೀಕರಿಸುವುದಿಲ್ಲ. ಇದರಿಂದ ಬ್ರಹ್ಮಾಂಡದಲ್ಲಿ ತಮೋಗುಣವು ಬಹಳ ಹೆಚ್ಚಾಗುತ್ತದೆ ಅಥವಾ ಕೆಟ್ಟ ಶಕ್ತಿಗಳ ಒತ್ತಡವು ಪ್ರಚಂಡವಾಗಿರುತ್ತದೆ. ಅದರ ಪರಿಣಾಮ ನಮ್ಮ ಮೇಲಾಗಬಾರದೆಂದು ಅತೀ ಹೆಚ್ಚಿನ ಪ್ರಮಾಣದಲ್ಲಿ ಶಿವತತ್ತ್ವವನ್ನು ಆಕರ್ಷಿಸುವ ಬಿಲ್ವಪತ್ರೆ, ಬಿಳಿಹೂವು, ರುದ್ರಾಕ್ಷಿಗಳ ಮಾಲೆ ಇತ್ಯಾದಿಗಳನ್ನು ಶಿವಲಿಂಗಕ್ಕೆ ಅರ್ಪಿಸಿ ವಾತಾವರಣದಲ್ಲಿರುವ ಶಿವತತ್ತ್ವವನ್ನು ಆಕರ್ಷಿಸಲಾಗುತ್ತದೆ. ಇದರಿಂದ ಕೆಟ್ಟ ಶಕ್ತಿಗಳಿಂದ ಹೆಚ್ಚಾಗಿರುವ ಒತ್ತಡವು ನಮಗೆ ಅಷ್ಟೊಂದು ಅರಿವಾಗುವುದಿಲ್ಲ.
– ಬ್ರಹ್ಮತತ್ತ್ವ (ಓರ್ವ ಸಾಧಕಿಯ ಮಾಧ್ಯಮದಿಂದ)


ಮಹಾಶಿವರಾತ್ರಿಯ ದಿನ ಶಿವತತ್ತ್ವವು ಎಂದಿಗಿಂತ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಶಿವತತ್ತ್ವದ ಲಾಭವು ಹೆಚ್ಚು ಪ್ರಮಾಣದಲ್ಲಿ ಸಿಗಲು ಮಹಾಶಿವರಾತ್ರಿಯ ದಿನ ಭಾವಪೂರ್ಣವಾಗಿ ಶಿವನ ಪೂಜೆ-ಅರ್ಚನೆಯನ್ನು ಮಾಡಬೇಕು; ಅದರೊಂದಿಗೆ ‘ಓಂ ನಮಃ ಶಿವಾಯ|’ ನಾಮಜಪವನ್ನು ಆದಷ್ಟು ಹೆಚ್ಚು ಮಾಡಬೇಕು. ಈ ದಿನದಂದು ‘ಓಂ ನಮಃ ಶಿವಾಯ|’ ಈ ನಾಮಜಪವನ್ನು ಮಾಡುವ ಜೀವಕ್ಕೆ ಶಿವನ ಸೂಕ್ಷ್ಮ-ಶಕ್ತಿ ಸಿಗುತ್ತದೆ. ಶಿವನ ಜನ್ಮವು ಸ್ಥೂಲ ಮತ್ತು ಸೂಕ್ಷ್ಮ ರೂಪದ ಕೆಟ್ಟ ಶಕ್ತಿಗಳನ್ನು ನಾಶ ಮಾಡಲು ಮತ್ತು ಮಾನವನ ಕಲ್ಯಾಣಕ್ಕಾಗಿ ಆಗಿದೆ.

*ಮಹಾಶಿವರಾತ್ರಿ ವ್ರತ ಏಕೆ ಮಾಡಬೇಕು?*

ಶಿವನ ವಿಶ್ರಾಂತಿಯ ಕಾಲವೆಂದರೆ ಮಹಾಶಿವರಾತ್ರಿ. ಆ ಕಾಲದಲ್ಲಿ ಶಿವತತ್ತ್ವದ ಕಾರ್ಯ ನಿಂತುಹೋಗುತ್ತದೆ ಅಂದರೆ ಆ ಸಮಯದಲ್ಲಿ ಶಿವನು ಧ್ಯಾನಾವಸ್ಥೆಯಿಂದ ಸಮಾಧಿ ಅವಸ್ಥೆಗೆ ಹೋಗುತ್ತಾನೆ. ಶಿವನ ಸಮಾಧಿಸ್ಥಿತಿ ಅಂದರೆ ಶಿವನು ತನಗಾಗಿ ಸಾಧನೆ ಮಾಡುವ ಕಾಲ. ಆದುದರಿಂದ ಆ ಕಾಲದಲ್ಲಿ ವಿಶ್ವದಲ್ಲಿನ ತಮೋಗುಣ ಶಿವತತ್ತ್ವ ಸ್ವೀಕರಿಸುವುದಿಲ್ಲ. ಆದುದರಿಂದ ವಿಶ್ವದಲ್ಲಿ ತಮೋಗುಣ ಬಹಳ ಹೆಚ್ಚಾಗುತ್ತದೆ. ಅದರ ಪರಿಣಾಮ ನಮ್ಮ ಮೇಲಾಗಬಾರದೆಂದು ಮಹಾಶಿವರಾತ್ರಿಯ ವ್ರತವನ್ನು ಕೈಗೊಂಡು ಶಿವತತ್ತ್ವವನ್ನು ಆಕರ್ಷಿಸಬೇಕು.

*ವ್ರತವನ್ನಾಚರಿಸುವ ಪದ್ಧತಿ*

ಉಪವಾಸ, ಪೂಜೆ ಮತ್ತು ಜಾಗರಣೆ ಇವು ಈ ವ್ರತದ ಮೂರು ಅಂಗಗಳಾಗಿವೆ.

*ವ್ರತದ ವಿಧಿ*

ಮಾಘ ಕೃಷ್ಣ ಚತುರ್ದಶಿಯಂದು ಏಕಭುಕ್ತರಾಗಿರಬೇಕು (ಒಂದು ಹೊತ್ತು ಊಟ ಮಾಡುವುದು). ಚತುರ್ದಶಿಯಂದು ಬೆಳಗ್ಗೆ ವ್ರತದ ಸಂಕಲ್ಪವನ್ನು ಮಾಡಿ ಸಾಯಂಕಾಲ ನದಿಯಲ್ಲಿ ಅಥವಾ ಕೆರೆಯಲ್ಲಿ ಶಾಸ್ತ್ರೋಕ್ತವಾಗಿ ಸ್ನಾನ ಮಾಡಬೇಕು. ಭಸ್ಮ ಮತ್ತು ರುದ್ರಾಕ್ಷಿಗಳನ್ನು ಧರಿಸಬೇಕು. ಪ್ರದೋಷಕಾಲದಲ್ಲಿ ಶಿವನ ದೇವಸ್ಥಾನಕ್ಕೆ ಹೋಗಬೇಕು. ಶಿವನ ಧ್ಯಾನವನ್ನು ಮಾಡಬೇಕು, ಆಮೇಲೆ ಶೋಡಷೋಪಚಾರ ಪೂಜೆಯನ್ನು ಮಾಡಿ ಭವ ಭಾವಿನಿ ಪ್ರೀತ್ಯರ್ಥ ತರ್ಪಣವನ್ನು ನೀಡಬೇಕು. ಶಿವನಿಗೆ ೧೦೮ ಕಮಲಗಳನ್ನು ಅಥವಾ ಬಿಲ್ವಪತ್ರೆಗಳನ್ನು ನಾಮಮಂತ್ರ ಸಹಿತ ಅರ್ಪಿಸಬೇಕು. ಆಮೇಲೆ ಪುಷ್ಪಾಂಜಲಿಯನ್ನು ಅರ್ಪಿಸಿ ಅರ್ಘ್ಯ ನೀಡಬೇಕು. ಪೂಜೆ, ಸ್ತೋತ್ರಪಠಣ ಮತ್ತು ಮೂಲಮಂತ್ರ ಜಪದ ನಂತರ ಶಿವನ ಮಸ್ತಕದ ಮೇಲಿನ ಒಂದು ಹೂವನ್ನು ತಮ್ಮ ತಲೆಯ ಮೇಲಿಟ್ಟುಕೊಳ್ಳಬೇಕು ಮತ್ತು ಕ್ಷಮಾಯಾಚನೆ ಮಾಡಬೇಕು.

*ಯಾಮಪೂಜೆ*

ಶಿವರಾತ್ರಿಯಂದು ರಾತ್ರಿಯ ನಾಲ್ಕು ಪ್ರಹರಗಳಲ್ಲಿ ನಾಲ್ಕು ಪೂಜೆಗಳನ್ನು ಮಾಡಬೇಕೆಂಬ ವಿಧಾನವಿದೆ. ಅದಕ್ಕೆ ‘ಯಾಮಪೂಜೆ’ ಎನ್ನುತ್ತಾರೆ. ಪ್ರತಿಯೊಂದು ಯಾಮಪೂಜೆಯಲ್ಲಿ ದೇವರಿಗೆ ಅಭ್ಯಂಗಸ್ನಾನ ಮಾಡಿಸಬೇಕು, ಅನುಲೇಪನ ಮಾಡಿ ಧೋತ್ರಾ, ಮಾವಿನ ಹಾಗೂ ಬಿಲ್ವದ ಎಲೆಗಳನ್ನು ಅರ್ಪಿಸಬೇಕು. ಅಕ್ಕಿಯ ಹಿಟ್ಟಿನ ೨೬ ದೀಪಗಳನ್ನು ಮಾಡಿ ಅವುಗಳನ್ನು ದೇವರಿಗೆ ಬೆಳಗಬೇಕು. ಪೂಜೆಯ ನಂತರ ೧೦೮ ದೀಪಗಳನ್ನು ದಾನ ಮಾಡಬೇಕು. ಪ್ರತಿಯೊಂದು ಪೂಜೆಯ ಮಂತ್ರಗಳು ಬೇರೆಬೇರೆಯಾಗಿರುತ್ತವೆ, ಅವುಗಳಿಂದ ಅರ್ಘ್ಯವನ್ನು ನೀಡಬೇಕು. ನೃತ್ಯ, ಗೀತೆ, ಕಥಾಶ್ರವಣ ಮುಂತಾದ ವಿಷಯಗಳಿಂದ ಜಾಗರಣೆಯನ್ನು ಮಾಡಬೇಕು. ಬೆಳಗ್ಗೆ ಸ್ನಾನ ಮಾಡಿ ಮತ್ತೊಮ್ಮೆ ಶಿವ ಪೂಜೆ ಮಾಡಬೇಕು. ಉಪವಾಸವನ್ನು ಬಿಡುವಾಗ ಬ್ರಾಹ್ಮಣಭೋಜನ ನೀಡಬೇಕು. ಆಶೀರ್ವಾದ ಪಡೆದುಕೊಂಡು ವ್ರತದ ಸಮಾಪ್ತಿ ಮಾಡಬೇಕು.

೧೨, ೧೪ ಅಥವಾ ೨೪ ವರ್ಷ ಈ ವ್ರತವನ್ನು ಆಚರಿಸಿದ ನಂತರ ಅದರ ಉದ್ಯಾಪನೆ (ವ್ರತದ ಪರಿಹಾರ) ಯನ್ನು ಮಾಡಬೇಕು.



*ಶಿವಾಷ್ಟಕಮ್*

ಪ್ರಭುಂ ಪ್ರಾಣನಾಥಂ ವಿಭುಂ ವಿಶ್ವನಾಥಂ ಜಗನ್ನಾಥ ನಾಥಂ ಸದಾನಂದ ಭಾಜಾಮ್ |
ಭವದ್ಭವ್ಯ ಭೂತೇಶ್ವರಂ ಭೂತನಾಥಂ, ಶಿವಂ ಶಂಕರಂ ಶಂಭು ಮೀಶಾನಮೀಡೇ || ೧ ||

ಗಲೇ ರುಂಡಮಾಲಂ ತನೌ ಸರ್ಪಜಾಲಂ ಮಹಾಕಾಲ ಕಾಲಂ ಗಣೇಶಾದಿ ಪಾಲಮ್ |
ಜಟಾಜೂಟ ಗಂಗೋತ್ತರಂಗೈ ರ್ವಿಶಾಲಂ, ಶಿವಂ ಶಂಕರಂ ಶಂಭು ಮೀಶಾನಮೀಡೇ || ೨||

ಮುದಾಮಾಕರಂ ಮಂಡನಂ ಮಂಡಯಂತಂ ಮಹಾ ಮಂಡಲಂ ಭಸ್ಮ ಭೂಷಾಧರಂ ತಮ್ |
ಅನಾದಿಂ ಹ್ಯಪಾರಂ ಮಹಾ ಮೋಹಮಾರಂ, ಶಿವಂ ಶಂಕರಂ ಶಂಭು ಮೀಶಾನಮೀಡೇ || ೩ ||

ವಟಾಧೋ ನಿವಾಸಂ ಮಹಾಟ್ಟಾಟ್ಟಹಾಸಂ ಮಹಾಪಾಪ ನಾಶಂ ಸದಾ ಸುಪ್ರಕಾಶಮ್ |
ಗಿರೀಶಂ ಗಣೇಶಂ ಸುರೇಶಂ ಮಹೇಶಂ, ಶಿವಂ ಶಂಕರಂ ಶಂಭು ಮೀಶಾನಮೀಡೇ || ೪ ||

ಗಿರೀಂದ್ರಾತ್ಮಜಾ ಸಂಗೃಹೀತಾರ್ಧದೇಹಂ ಗಿರೌ ಸಂಸ್ಥಿತಂ ಸರ್ವದಾಪನ್ನ ಗೇಹಮ್ |
ಪರಬ್ರಹ್ಮ ಬ್ರಹ್ಮಾದಿಭಿರ್-ವಂದ್ಯಮಾನಂ, ಶಿವಂ ಶಂಕರಂ ಶಂಭು ಮೀಶಾನಮೀಡೇ || ೫ ||

ಕಪಾಲಂ ತ್ರಿಶೂಲಂ ಕರಾಭ್ಯಾಂ ದಧಾನಂ ಪದಾಮ್ಭೋಜ ನಮ್ರಾಯ ಕಾಮಂ ದದಾನಮ್ |
ಬಲೀವರ್ಧಮಾನಂ ಸುರಾಣಾಂ ಪ್ರಧಾನಂ, ಶಿವಂ ಶಂಕರಂ ಶಂಭು ಮೀಶಾನಮೀಡೇ || ೬ ||

ಶರಚ್ಚಂದ್ರ ಗಾತ್ರಂ ಗಣಾನಂದಪಾತ್ರಂ ತ್ರಿನೇತ್ರಂ ಪವಿತ್ರಂ ಧನೇಶಸ್ಯ ಮಿತ್ರಮ್ |
ಅಪರ್ಣಾ ಕಲತ್ರಂ ಸದಾ ಸಚ್ಚರಿತ್ರಂ, ಶಿವಂ ಶಂಕರಂ ಶಂಭು ಮೀಶಾನಮೀಡೇ || ೭ ||

ಹರಂ ಸರ್ಪಹಾರಂ ಚಿತಾ ಭೂವಿಹಾರಂ ಭವಂ ವೇದಸಾರಂ ಸದಾ ನಿರ್ವಿಕಾರಂ|
ಶ್ಮಶಾನೇ ವಸಂತಂ ಮನೋಜಂ ದಹಂತಂ, ಶಿವಂ ಶಂಕರಂ ಶಂಭು ಮೀಶಾನಮೀಡೇ || ೮ ||

ಸ್ವಯಂ ಯಃ ಪ್ರಭಾತೇ ನರಶ್ಶೂಲ ಪಾಣೇ ಪಠೇತ್ ಸ್ತೋತ್ರರತ್ನಂ ತ್ವಿಹಪ್ರಾಪ್ಯರತ್ನಮ್ |
ಸುಪುತ್ರಂ ಸುಧಾನ್ಯಂ ಸುಮಿತ್ರಂ ಕಲತ್ರಂ ವಿಚಿತ್ರೈಸ್ಸಮಾರಾಧ್ಯ ಮೋಕ್ಷಂ ಪ್ರಯಾತಿ ||

Saturday, 15 February 2020

ಸಾಷ್ಟಾಂಗ ನಮಸ್ಕಾರ

💠🙏 *ಸಾಷ್ಟಾಂಗ ನಮಸ್ಕಾರ* 🙏💠

ನಮಸ್ಕಾರಗಳಲ್ಲಿ ಸಾಷ್ಟಾಂಗ ನಮಸ್ಕಾರ ಕೂಡ ಒಂದಾಗಿದ್ದು, ಈ ಸಮಯದಲ್ಲಿ ದೇಹದ ಎಲ್ಲಾ ಅಂಗಗಳು ಭೂಮಿಯನ್ನು ಸ್ಪರ್ಶಿಸುತ್ತವೆ. 

ಇದನ್ನು "ದಂಡಾಕಾರ ನಮಸ್ಕಾರ" ಮತ್ತು "ಉದ್ಧಂಡ ನಮಸ್ಕಾರ" ಎಂದೂ ಕರೆಯಲಾಗುತ್ತದೆ.

 ಇದರ ಸಂಪೂರ್ಣ ಅರ್ಥವೆಂದರೆ ದಂಡ ಎಂದರೆ ಕೋಲನ್ನು ಸೂಚಿಸುತ್ತಿದ್ದು ಉದ್ಧಂಡ ನಮಸ್ಕಾರ ಮಾಡುವುದೆಂದರೆ ನಿಮ್ಮ ದೇಹವನ್ನು ಕೋಲಿನಂತೆ ದೃಢಗೊಳಿಸಿ ದೇವರಿಗೆ ನಮಸ್ಕರಿಸುವುದು ಎಂದಾಗಿದೆ.

 ನನ್ನ ಸಂಪೂರ್ಣವನ್ನೂ ನಿನಗೆ ಒಪ್ಪಿಸುತ್ತಿದ್ದೇನೆ, ಇಲ್ಲವೇ ದೇವರೇ ನಿನಗೆ ನಾನು ಶರಣಾಗತಿಯಾಗುತ್ತಿದ್ದೇನೆ ಎಂಬುದು ಈ ಸಾಷ್ಟಾಂಗ ನಮಸ್ಕಾರದ ಅರ್ಥವಾಗಿದೆ. ಇನ್ನು ಕೆಲವೊಂದು ಸಂದರ್ಭಗಳಲ್ಲಿ ಈ ರೀತಿಯ ನಮಸ್ಕಾರವನ್ನು ನಮ್ಮ ಅಹಂಕಾರವನ್ನು ದೇವರಿಗೆ ಒಪ್ಪಿಸಿಕೊಂಡು ಸರ್ವವೂ ನೀವೇ ಎಂಬ ಶರಣಾಗತಿಯ ಭಾವವಾಗಿದೆ. 

ಆದರೆ ಸಾಷ್ಟಾಂಗ ನಮಸ್ಕಾರವನ್ನು ಮಾಡುವಾಗ ಯಾವುದೇ ಗಾಯಗಳು ದೇಹಕ್ಕೆ ಉಂಟಾಗುವ ಸಂಭವ ತುಂಬಾ ಕಡಿಮೆ ಇರುತ್ತದೆ. ಸಾಷ್ಟಾಂಗ ನಮಸ್ಕಾರದಲ್ಲಿ ನಮ್ಮ ಅಹಂಕಾರ ಹಿರಿತನವನ್ನು ಬದಿಗಿಟ್ಟು ಮಾನವೀಯತೆಯನ್ನು ಬೆಳೆಸಿಕೊಳ್ಳುವ ಸ್ಥಿತಿ ಏರ್ಪಡುತ್ತದೆ. 

ಇತರರು ನಮ್ಮ ತಲೆಯನ್ನು ಕೆಳಕ್ಕೆ ಬಾಗುವಂತೆ ಮಾಡಿದರೆ ಅದು ಅಪಕೀರ್ತಿಯಾಗುತ್ತದೆ ಆದರೆ ಸ್ವತಃ ನಾವೇ ನಮ್ಮ ತಲೆಯನ್ನು ತಗ್ಗಿಸಿದರೆ ಇದು ಪುರಸ್ಕಾರ ಮತ್ತು ಗೌರವದ ಸಂಕೇತವಾಗಿದೆ. ನೀವು ಗುರು ಹಿರಿಯರಿಗೆ ಈ ರೀತಿಯ ನಮಸ್ಕಾರವನ್ನು ಮಾಡುವುದು ಎಂದರೆ ನೀವು ದೇವರಿಗೆ ನಮಸ್ಕಾರವನ್ನು ಮಾಡಿದಂತೆ. ನಿಮ್ಮ ಸಂಕಷ್ಟವನ್ನು ಅರ್ಪಣೆಯನ್ನು ಅವರುಗಳ ಮೂಲಕ ನೀವು ದೇವರಿಗೆ ಮಾಡುತ್ತಿದ್ದೀರಿ ಎಂದರ್ಥವಾಗಿದೆ...

ಸಾಷ್ಟಾಂಗ ನಮಸ್ಕಾರ ಮಹತ್ವ 
ದೇವರ ಮುಂದೆ ನಮ್ಮ ಅಹಂಕಾರವನ್ನು ತ್ಯಜಿಸುವುದು ಇದರರ್ಥ ಕೂಡ. ತಲೆಯನ್ನು ಬೇರೆಯವರು ತಗ್ಗಿಸುವಂತೆ ಮಾಡಿದರೆ ಅದು ಅಗೌರವ. ಆದರೆ ನಾವಾಗಿಯೇ ತಲೆಯನ್ನು ತಗ್ಗಿಸಿದರೆ ಅದು ಗೌರವ ಎನ್ನುವುದು ನಮಸ್ಕಾರದ ಅರ್ಥವಾಗಿದೆ. 

ಸನ್ಯಾಸಿಗಳು,ಗುರುಗಳು ಹಾಗೂ ಹಿರಿಯರ ಮುಂದೆ ಇಂತಹ ನಮಸ್ಕಾರ ಮಾಡಿದಾಗ ನಿಮ್ಮ ಪ್ರಾರ್ಥನೆಯು ಅವರ ಮೂಲಕ ದೇವರಿಗೆ ತಲುಪಲಿದೆ ಎನ್ನುವ ನಂಬಿಕೆಯಿದೆ. ನಮಸ್ಕಾರವನ್ನು ಸ್ವೀಕರಿಸುವಾತ ಇದು ತನಗೆ ಮಾಡಿದಂತಹ ನಮಸ್ಕಾರವಲ್ಲ, ಇದನ್ನು ದೇವರಿಗೆ ಮುಟ್ಟಿಸಿ ನಮಸ್ಕಾರ ಮಾಡಿದಾತನಿಗೆ ಅದರ ಶ್ರೇಯಸ್ಸನ್ನು ತಲುಪಿಸಬೇಕಾಗಿದೆ ಎಂದು ಭಾವಿಸಬೇಕು.

ಹಾಗಿದ್ದರೆ, ಈ ನಮಸ್ಕಾರವನ್ನು ಹೇಗೆ ಮಾಡಲಾಗುತ್ತದೆ? 
ಈ ನಮಸ್ಕಾರವನ್ನು ಪುರುಷರು ಮಾಡುವಾಗ ಕೈಗಳು, ಹೊಟ್ಟೆ, ಮಂಡಿ, ಕಾಲುಗಳನ್ನು ಮಡಚಿಕೊಂಡು ಭೂಮಿಗೆ ಸ್ಪರ್ಶವಾಗುವಂತೆ ನಮಸ್ಕಾರ ಮಾಡುವುದಾಗಿದೆ. ಇನ್ನು ಸ್ತ್ರೀಯರು ಕೈ ಮತ್ತು ಮಂಡಿಯನ್ನು ಮಡಿಚಿಕೊಂಡು ಭೂಮಿಗೆ ಸ್ಪರ್ಶವಾಗುವಂತೆ ನಮಸ್ಕರಿಸುತ್ತಾರೆ.

ಮಹಿಳೆಯರು ಸಾಷ್ಟಾಂಗ ನಮಸ್ಕಾರ ಮಾಡಬಹುದೇ? 
ವೇದಗಳಲ್ಲಿ ಹೇಳಿರುವಂತೆ, ಮಹಿಳೆಯರು ಸಾಷ್ಟಾಂಗ ನಮಸ್ಕಾರ ಮಾಡಬಾರದು ಎಂದಾಗಿದೆ. ಏಕೆಂದರೆ ಮಹಿಳೆಯ ಎದೆಯ ಭಾಗ ಮತ್ತು ಕಿಬ್ಬೊಟ್ಟೆಯ ಭಾಗ ಭೂಮಿಯನ್ನು ಸ್ಪರ್ಶಿಸಬಾರದು ಎಂದಾಗಿದೆ.

ಮಹಿಳೆಯರು ಸಾಷ್ಟಾಂಗ ನಮಸ್ಕಾರವನ್ನು ಏಕೆ ಮಾಡಬಾರದು? 
ಮಹಿಳೆಯರು ಪಂಚಾಂಗ ನಮಸ್ಕಾರವನ್ನು ಮಾಡಬೇಕು ಸಾಷ್ಟಾಂಗ ನಮಸ್ಕಾರವನ್ನು ಮಾಡಬಾರದು. ಪಂಚಾಗ ನಮಸ್ಕಾರದಲ್ಲಿ ಮಹಿಳೆಯು ಮಂಡಿಯೂರಿ ನಮಸ್ಕಾರವನ್ನು ಮಾಡುತ್ತಾರೆ. ಮಹಿಳೆಯ ಸ್ತನದ ಭಾಗವು ಮಗುವಿನ ಪೋಷಣೆಯನ್ನು ಮಾಡುತ್ತದೆ ಅಂತೆಯೇ ಆಕೆಯ ಹೊಟ್ಟೆಯಭಾಗವು ಮಗುವನ್ನು ಹೊರುವ ಕಾರ್ಯವನ್ನು ಮಾಡುವುದರಿಂದ ಈ ಭಾಗಗಗಳು ಭೂಮಿಯನ್ನು ಸ್ಪರ್ಶಿಸುವುದು ನಿಷಿದ್ಧವಾಗಿದೆ.

🏹ಕೃಷ್ಣಾರ್ಪಣಮಸ್ತು ಸರ್ವಜನ ಸುಖಿನೋಭವಂತು🌈

☘ *ಭಗವತ್ಪ್ರಸಾದ* 🦚