Popular Posts

Sunday, 27 December 2020

ವೈಕುಂಠ ಏಕಾದಶಿ

 ವೈಕುಂಠ ಏಕಾದಶಿ


ಧನುರ್ಮಾಸದಲ್ಲಿ ಬರುವ ಅಂದರೆ ಸಾಮಾನ್ಯವಾಗಿ ಮಾರ್ಗಶಿರ          

/ಪುಷ್ಯ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು "ವೈಕುಂಠ ಏಕಾದಶಿ" ಆಚರಿಸಲಾಗುತ್ತದೆ. ಅಂದು ವೈಕುಂಠದ ಉತ್ತರ ಬಾಗಿಲ ಮೂಲಕ ನಾರಾಯಣ ಮುಕ್ಕೋಟಿ ದೇವತೆಗಳಿಗೆ ದರ್ಶನ ನೀಡುತ್ತಾನೆ ಎಂಬುದು ಪ್ರತೀತಿ. ಅದೇ ಕಾರಣಕ್ಕೆ ವೈಷ್ಣವ ಆಲಯಗಳಲ್ಲಿ ವಿಶೇಷವಾಗಿ ವೈಕುಂಠ ದ್ವಾರ ರೂಪಿಸಿ, ಭಕ್ತರಿಗೆ ಪ್ರವೇಶ ಕಲ್ಪಿಸಿರುತ್ತಾರೆ


ಏಕಾದಶಿಗೆ ಸಂಬಂದಿಸಿದ ಕೃಷ್ಣಕಥೆ ಭಾಗವತದಲ್ಲಿ ಬಂದಿದೆ:-.


ನಂದಗೋಪನು ಶ್ರೀಕೃಷ್ಣನ ಸನ್ನಿಧಾನದಲ್ಲಿ ಏಕಾದಶಿ ವ್ರತವನ್ನು ತಪ್ಪದೇ ಆಚರಿಸುತ್ತಿದ್ದ.  ಒಮ್ಮೆ ಏಕಾದಶಿ ವ್ರತಮಾಡಿ ಮರುದಿನ ಅಲ್ಪದ್ವಾದಶಿ ಇದ್ದುದರಿಂದ ನಸುಕಿನಲ್ಲಯೇ ಯಮುನಾ ನದಿ ಯಲ್ಲಿ ಸ್ನಾನಕ್ಕೆ ಇಳಿಯುತ್ತಾನೆ.


ಆ ಸಮಯ ಇನ್ನೂ ರಾಕ್ಷಸರ ಸಂಚಾರ ಕಾಲವಾಗಿತ್ತು.  ರಾತ್ರಿ ಕಾಲದಲ್ಲಿ ನದೀ ಸ್ನಾನಕ್ಕೆ ಹೋಗಬಾರದು.  ಆ ತಪ್ಪಿಗೆ ಶಿಕ್ಷೆಯಾಗಿ  ವರುಣನ ಭೃತ್ಯನೊಬ್ಬ ನಂದಗೋಪನನ್ನು ಎಳೆದುಕೊಂಡು ವರುಣ ಲೋಕಕ್ಕೆ ಬರುತ್ತಾನೆ. ಇತ್ತ ನಂದಗೋಪ ಸ್ನಾನಕ್ಕೆಂದು ನದಿಗೆ ಹೋದ ನಂದಗೋಪ ಬಾರದೇ ಇದ್ದುದರಿಂದ ಗೋಪಾಲಕರೆಲ್ಲ ಚಿಂತಿತರಾಗಿ ಕೃಷ್ಣ ಬಲರಾಮರಿಗೆ ತಿಳಿಸುತ್ತಾರೆ.


ಶ್ರೀಕೃಷ್ಣನು ವಿಷಯ ತಿಳಿದವನಾಗಿ ಎಲ್ಲ ಗೋಪಾಲಕರಿಗೆ ಅಭಯವನ್ನು ಕೊಡುತ್ತಾನೆ. ಕೃಷ್ಣಾವತಾರದಲ್ಲಿ ತಂದೆಯಾದ ನಂದಗೋಪನನ್ನು ಕರೆತರುವದಾಗಿ ಗೋಪಾಲಕರಿಗೆ ತಿಳಿಸಿ ವರುಣಲೋಕಕ್ಕೆ ಹೋಗುತ್ತಾನೆ.


ವರುಣಲೋಕದಲ್ಲಿ ಶ್ರೀಕೃಷ್ಣನನ್ನು ನೋಡಿದ ವರುಣ ಸಂತೋಷದಿಂದ ಬರಮಾಡಿಕೊಳ್ಳುತ್ತಾನೆ, ತನ್ನ ಸೇವಕನಿಂದ ಆದ ಪ್ರಮಾದವನ್ನು ಕ್ಷಮಿಸುವಂತೆ ಶ್ರೀಕೃಷ್ಣನಲ್ಲಿ ಪ್ರಾರ್ಥಿಸುತ್ತಾನೆ. ಶ್ರೀಕೃಷ್ಣ ವರುಣನಿಗೆ ಆಶೀರ್ವದಿಸಿ ನಂದಗೋಪನೊಂದಿಗೆ ಯಮುನಾತೀರಕ್ಕೆ ಬರುತ್ತಾನೆ.


ಗೋಪಾಲಕರಿಗೆ ನಂದಗೋಪನು ವರುಣಲೋಕದಲ್ಲಿ ಕಂಡ ಶ್ರೀಕೃಷ್ಣನ ನಿಜರೂಪವನ್ನು ಮತ್ತು ಅಲ್ಲಿ ದೊರೆತ ಭವ್ಯ ಸ್ವಾಗತವನ್ನು ವರ್ಣಿಸುತ್ತಿದ್ದರೆ ಎಲ್ಲ ಗೋಪಾಲಕರು ಭಕ್ತಿಯಿಂದ ಆಲಿಸುತ್ತಿದ್ದರು. ನಮಗೆ ಶ್ರೀಮನ್ನಾರಾಯಣನ ದಿವ್ಯದರ್ಶನದ ಭಾಗ್ಯ ಇಲ್ಲವಾಯಿತಲ್ಲ ಎಂದು ಪರಿತಪಿಸುತ್ತಿದ್ದರು.


ಇದನ್ನು ತಿಳಿದ ಶ್ರೀಕೃಷ್ಣ ಎಲ್ಲ ಗೋಪಾಲಕರಿಗೆ ಯಮುನಾ ತೀರ್ಥದ ಬ್ರಹ್ಮಕುಂಡದಲ್ಲಿ ಸ್ನಾನ ಮಾಡಿ ಬರುವಂತೆ ತಿಳಿಸಿದ. ಗೋಪಾಲಕರು ಸ್ನಾನಮಾಡಿ ಬರುತ್ತಿದ್ದಂತೆ ವೈಕುಂಠಲೋಕ ಗೋಚರಿಸಿತು. ಶ್ರೀಕೃಷ್ಣನ ದಿವ್ಯವಾದ ಅನೇಕ ರೂಪಗಳು ಅವರಿಗೆ ಕಂಡವು.


ಮುಕ್ಕೋಟಿ ದ್ವಾದಶಿ ಅಂದರೇನು?  


ಧನುರ್ಮಾಸದಲ್ಲಿ ಬರುವ ಶುದ್ಧ ದ್ವಾದಶಿಯಂದು ಮುಕ್ಕೋಟಿ ದ್ವಾದಶಿ ಆಚರಿಸುತ್ತಾರೆ.  ಏಕಾದಶಿಯ ಮರು ದಿನ ದ್ವಾದಶಿ. ಮೂವತ್ತ್ಮೂರು ಕೋಟಿ ದೇವತೆಗಳು ಅಂದು ತಿರುಮಲದ ದೇವಾಲಯ ಪಕ್ಕದಲ್ಲಿರುವ ಸ್ವಾಮಿ ಪುಷ್ಕರಣಿಯಲ್ಲಿ ತೀರ್ಥ ಸ್ನಾನ ಮಾಡುತ್ತಾರೆ. ಆದ್ದರಿಂದ ಮುಕ್ಕೋಟಿ ದ್ವಾದಶಿ ಎಂಬ ಹೆಸರಿದೆ.


ಯಾವ ಕ್ಷೇತ್ರದಲ್ಲಿ ವಿಷ್ಣುವಿನ ದರ್ಶನ ಮಾಡಿದರೆ ಶ್ರೇಷ್ಠ?


ಸ್ವಯಂವ್ಯಕ್ತ ಕ್ಷೇತ್ರಗಳಲ್ಲಿ ಮಹಾವಿಷ್ಣುವಿನ ದರ್ಶನ  ಮಾಡುವುದು ಶ್ರೇಷ್ಠ.  ಅವುಗಳು – ತಿರುಮಲ, ಶ್ರೀಮೂಷ್ಣಂ, ತೋತಾದ್ರಿ,  ಶ್ರೀರಂಗ, ಇತ್ಯಾದಿ.    ಇಲ್ಲಿ ಮಾಡಲಾಗದಿದ್ದರೆ ವೈಷ್ಣವ ಸಂಪ್ರದಾಯದ ದೇವಸ್ಥಾನಗಳಲ್ಲಿ ಕೂಡ ಮಾಡಬಹುದು.


ಪ್ರಶ್ನೋತ್ತರ ವೈಕುಂಠ ಏಕಾದಶಿ ಬಗ್ಗೆ :


*ವೈಕುಂಠ ಏಕಾದಶಿ 


1. ವೈಕುಂಠ ಏಕಾದಶಿ ಎಂದು ಆಚರಿಸಲಾಗುತ್ತದೆ?


ಉತ್ತರ – ಧನುರ್ಮಾಸದಲ್ಲಿ ಬರುವ ಶುಕ್ಲ ಪಕ್ಷದ ಏಕಾದಶಿ (ಸಾಮಾನ್ಯವಾಗಿ ಮಾರ್ಗಶಿರ ಅಥವಾ ಪುಷ್ಯ ಮಾಸದಲ್ಲಿ) ಆಚರಿಸಲಾಗುತ್ತದೆ.


2. ವೈಕುಂಠ ಏಕಾದಶಿಯಂದು ಉಪವಾಸ ಮಾಡಬೇಕಾ ? ಫಲಾಹಾರ ಮಾಡಬಹುದಾ


ಉತ್ತರ – ಎಲ್ಲಾ ಏಕಾದಶಿಯಂದೂ ಉಪವಾಸ ಮಾಡಬೇಕು.  ಅಶಕ್ತರು, ಬಸುರಿ, ಬಾಣಂತಿಯರು, ಎಂಟು ವರ್ಷದ ಒಳಗಿನವರು ಮತ್ತು ಎಂಭತ್ತು ದಾಟಿದವರು ಫಲಾಹಾರ ಮಾಡಬಹುದು.  ಬೇರೆ ಕಾರಣಗಳಿಂದ ಉಪವಾಸ ಮಾಡಲಾಗದವರು ಹಣ್ಣೂ ಸಜ್ಜಿಗೆ  ಮುುಂತಾದ ಉಪ್ಪು ರಹಿತ ಪದಾರ್ಥ  ತಿನ್ನಬಾರದು.


3. ಕೆಲವು ದೇವಸ್ಥಾನಗಳಲ್ಲಿ ನೈವೇದ್ಯ ರೂಪದಲ್ಲಿ ಪೊಂಗಲ್, ಹುಗ್ಗಿ, ಚಿತ್ರಾನ್ನ ಇತ್ಯಾದಿ ಕೊಡುತ್ತಾರಲ್ಲ ಅದನ್ನು ತಿನ್ನಬಹುದೆ?


ಉತ್ತರ – ತಿನ್ನಬಾರದು. ಮಾಧ್ವ ಸಂಪ್ರದಾಯದ ಯಾವ ದೇವಸ್ಥಾನದಲ್ಲೂ ಕೊಡುವುದಿಲ್ಲ. ಅಕಸ್ಮಾತ್ ಅವರೇನಾದರೂ ಕೊಟ್ಟರೆ ಅವರಿಗೆ ಕೊಡಬಾರದೆಂದು ಹೇಳಿ.


4. ಏಕಾದಶಿಯಂದು ತೀರ್ಥ ಎಷ್ಟು ಸಲ ತೆಗೆದುಕೊಳ್ಳಬೇಕು.


ಉತ್ತರ – ನಿರ್ಮಾಲ್ಯ ಒಂದು ಸಾರೀ ಮತ್ತು ತೀರ್ಥ ಒಂದು ಸಾರಿ ಮಾತ್ರ.


5. ಮನೆಯಲ್ಲಿ ತೀರ್ಥ ತೆಗೆದುಕೊಂಡವರು ದೇವಸ್ಥಾನದಲ್ಲೂ ತೆಗೆದುಕೊಳ್ಳಬಹುದಾ?


ಉತ್ತರ – ಮನೆಯಲ್ಲಿ ತೆಗೆದುಕೊಂಡಿದ್ದರೆ ಏಕಾದಶಿಯಂದು ಅಲ್ಲಿ ಸ್ವೀಕರಿಸಬೇಡಿ.


6. ವೈಕುಂಠ ಏಕಾದಶಿಯಂದು ಉಪವಾಸ ಮಾಡಿದರೆ ಏನು ಫಲ?


ಉತ್ತರ – ವೈಕುಂಠ ಏಕಾದಶಿಯಂದು ಉಪವಾಸ ಮಾಡಿದರೆ ಒಂದು ವರ್ಷದ ೨೪ ಏಕಾದಶಿ ಉಪವಾಸ ಮಾಡಿದ ಫಲ. ಪ್ರತಿ ಏಕಾದಶಿಯೂ ಉಪವಾಸ ಮಾಡಲೇಬೇಕು.


7. ದಿನತ್ರಯ ಎಂದರೇನು?

ಉತ್ತರ – ದಶಮಿ, ಏಕಾದಶಿ, ದ್ವಾದಶಿ ಈ ಮೂರೂ ದಿನಗಳನ್ನು ದಿನತ್ರಯವೆನ್ನುತ್ತಾರೆ.


8. ಏಕಾದಶಿ ಶ್ರಾದ್ಧ ಏಕಾದಶಿಯಂದೇ ಮಾಡಬಹುದಾ?

ಉತ್ತರ – ಏಕಾದಶಿಯಂದು ಶ್ರಾದ್ಧ ಮಾಡಬಾರದು. ದಶಮೀ ಅಥವಾ ದ್ವಾದಶಿ ಮಾಡಬೇಕು (ನಿಮ್ಮ ಮಠದ ಪಂಚಾಂಗದಲ್ಲಿ ಶ್ರಾದ್ಧ ಕಾಲಂ ನೋಡಿ)


9. ಏಕಾದಶಿ ಆಚರಿಸಿದ ಕೆಲವು ಭಾಗವತೋತ್ತಮರ ಹೆಸರು ತಿಳಿಸಿ.


ಉತ್ತರ – ಭೀಮಸೇನ, ದೂರ್ವಾಸರು, ಅಂಬರೀಷ, ರುಕ್ಮಾಂಗದ ಮುಂತಾದವರು.


10. ದೂರ್ವಾಸರು ಅಂಬರೀಷನಿಗಿಂತ ದೊಡ್ಡವರಾದರೂ ಅವರು ಏಕಾದಶಿಯ ಅನುಸರಿಸಲಿಲ್ಲವೇಕೆ?

ಉತ್ತರ – ದೂರ್ವಾಸರು ರುದ್ರದೇವರ ಅವತಾರ. ಪರಮ ವೈಷ್ಣವರು. ಆದರೆ ಅವರು ಅಂಬರೀಷನ ಏಕಾದಶಿ ಮಹತ್ವ ತಿಳಿಸಬೇಕಿತ್ತು. ಅದಕ್ಕೇ ಪರಮಾತ್ಮನ ಪ್ರೇರಣಾನುಸಾರ ಹಾಗೆ ಮಾಡಿರುತ್ತಾರೆ .


11. ಏಕಾದಶಿ ಅಭಿಮಾನಿ ದೇವತೆ ಯಾರು?

ದಶಮಿ, ಏಕಾದಶಿ ಮತ್ತು ದ್ವಾದಶಿಗೆ ಶ್ರೀಹರಿಯೇ ಅಭಿಮಾನಿ ದೇವತೆ.


ಸಂಗ್ರಹ : ನರಹರಿ ಸುಮಧ್ವ

ಸುಮಧ್ವಸೇವ

ಜಪಮಾಲೆಯಲ್ಲಿ 108 ಮಣಿಗಳು

 ಜಪಮಾಲೆಯಲ್ಲಿ 108 ಮಣಿಗಳು ಯಾಕೆ ಇರುತ್ತವೆ ಗೊತ್ತಾ?


ದೇವರ ಆರಾಧನೆ ಹಾಗೂ ಧ್ಯಾನ ಮಾಡುವಾಗ ವಿಶೇಷ ಮಂತ್ರಗಳನ್ನು ಹೇಳುವುದು ಮತ್ತು ಜಪ ಮಾಡುವುದು ಒಂದು ಧಾರ್ಮಿಕ ಪದ್ಧತಿ. ಈ ಪವಿತ್ರ ಆಚರಣೆಯಲ್ಲಿ ಸಾಮಾನ್ಯವಾಗಿ ದೇವರ ನಾಮವನ್ನು 108 ಬಾರಿ ಹೇಳುತ್ತೇವೆ. ಇಲ್ಲವೇ ದೇವರಿಗೆ ಇರುವ 108 ಹೆಸರುಗಳನ್ನು (ಅಷ್ಟೋತ್ತರ ಶತನಾಮ) ಹೇಳುವುದು ಸಹಜ. ದೇವರ ನಾಮ ಸ್ಮರಣೆಯಲ್ಲಿ ವ್ಯತ್ಯಾಸ ಅಥವಾ ತಪ್ಪು ಸಂಖ್ಯೆಗಳ ಬಳಕೆ ಆಗಬಾರದು ಎನ್ನುವ ಉದ್ದೇಶದಿಂದ ಜಪ ಮಾಲೆಯನ್ನು ಬಳಸಲಾಗುವುದು. ಜಪ ಮಾಲೆಯಲ್ಲಿ 108 ಮಣಿಗಳು ಇರುವುದರಿಂದ ಧ್ಯಾನ ಅಥವಾ ಜಪದ ರೀತಿಯು ಸರಿಯಾಗಿ ನಡೆಯುವುದು. ಎಲ್ಲಾ ಜಪ ಮಾಲೆಯಲ್ಲಿ 108 ಮಣಿಗಳೇ ಏಕೆ ಇರಬೇಕು? ದೇವರ ನಾಮವನ್ನು 108 ಬಾರಿಯೇ ಏಕೆ ಜಪಿಸಬೇಕು? 108 ಎನ್ನುವುದು ಏಕೆ ಶ್ರೇಷ್ಠ? ಎನ್ನುವ ಗೊಂದಲ ಕಾಡುವುದು ಸಹಜ. ಅಂತಹ ಒಂದು ಗೊಂದಲಗಳಿಗೆ ಇಲ್ಲಿದೆ ಮಾಹಿತಿ.

                                          ‌    ‌                        ಜಪಮಾಲೆ ಪವಿತ್ರ ಧಾರ್ಮಿಕ ವಸ್ತುಗಳಲ್ಲಿ ಒಂದಾಗಿದೆ


ಪವಿತ್ರ ಧಾರ್ಮಿಕ ವಸ್ತುಗಳಲ್ಲಿ ಒಂದಾದ ಜಪ ಮಾಲೆಯು 108 ಮಣಿಗಳನ್ನು ಹೊಂದಲು ಸಾಕಷ್ಟು ಕಾರಣಗಳಿವೆ. 108 ಬಾರಿ ಜಪ ಮಾಡುವುದು ಅಥವಾ ಅದಕ್ಕಿಂತಲೂ ಹೆಚ್ಚು ಬಾರಿ ಪಠಿಸುವುದರಿಂದ ಯಾವ ತೊಂದರೆಯೂ ಉಂಟಾಗದು. ಪ್ರಾಮಾಣಿಕತೆ, ಭಕ್ತಿ ಭಾವದಿಂದ ಮಾಡುವ ಎಲ್ಲಾ ಸಂಗತಿಯೂ ದೇವರಿಗೆ ಪ್ರಿಯವಾದದ್ದೇ. ಅದರಿಂದ ಸಾಕಷ್ಟು ಪುಣ್ಯ ಪ್ರಾಪ್ತಿಯಾಗುವುದನ್ನು ಎನ್ನಲಾಗುತ್ತದೆ.

 ‌                                                                    ಧಾರ್ಮಿಕ ಮಹತ್ವ


9 ಮತ್ತು 12 ಎನ್ನುವ ಈ ಎರಡು ಸಂಖ್ಯೆಗಳು ಅನೇಕ ಸಾಂಪ್ರದಾಯಿಕ ಆಧ್ಯಾತ್ಮಿಕ ಮಹತ್ವವನ್ನು ಪಡೆದುಕೊಂಡಿದೆ. 12ರ ಸಂಖ್ಯೆಯನ್ನು 9 ಬಾರಿ ಹಾಕಿದರೆ 108 ಎನ್ನುವ ಫಲಿತಾಂಶದ ಸಂಖ್ಯೆ ದೊರೆಯುವುದು. ಅಂತೆಯೇ 108ರಲ್ಲಿ 1 ಮತ್ತು 8 ನ್ನು ಸೇರಿಸಿದರೆ 9 ಎನ್ನುವ ಉತ್ತರ ದೊರೆಯುವುದು. ಹಾಗಾಗಿ 9 ಮತ್ತು 12, 108ಕ್ಕೆ ಸಮಾನವಾಗಿರುತ್ತವೆ. ಅಂತೆಯೇ ಗಣಿತದಲ್ಲಿ 1, 2 ಮತ್ತು 3 ಅಧಿಕ ಶಕ್ತಿಯನ್ನು ಪಡೆದುಕೊಂಡಿವೆ. 1ರ ಶಕ್ತಿಯು 1x 1= 1ಕ್ಕೆ ಸಮನಾಗಿರುತ್ತದೆ. 2ರ ಶಕ್ತಿಯು 2x2=4 ಆಗಿರುತ್ತದೆ. 3ರ ಶಕ್ತಿಯು 3x3x3= 27ಆಗಿರುತ್ತದೆ. ಅಂದರೆ 1x 4x 27= 108 ಬರುವುದು. ಹಾಗಾಗಿ 108ನ್ನು ಹರ್ಷದ ಸಂಖ್ಯೆ ಎಂದು ಪರಿಗಣಿಸಲಾಗುವುದು. ಹರ್ಷ ಎಂದರೆ ದೊಡ್ಡ ಪ್ರಮಾಣದ ಸಂತೋಷ ಎನ್ನುವ ಅರ್ಥವನ್ನು ನೀಡುವುದು.


108 ಪವಿತ್ರ ಮೊತ್ತ

108-

ಕೆಲವು ಪುರಾಣ ಹೇಳಿಕೆಗಳು ಹಾಗೂ ಲೆಕ್ಕಾಚಾರದ ಪ್ರಕಾರ ಮನುಷ್ಯನು 108 ಬಗೆಯ ಆಸೆಗಳನ್ನು ಹೊಂದಿರುತ್ತಾನೆ. ಅಂತೆಯೇ 108 ಬಗೆಯ ಸುಳ್ಳುಗಳನ್ನು ಹೇಳುತ್ತಾನೆ. 108 ಬಗೆಯ ಭ್ರಮೆಯನ್ನು ಅಥವಾ ಅಜ್ಞಾನ ರೂಪವನ್ನು ಹೊಂದಿರುತ್ತಾನೆ. ಸಂಸ್ಕೃತವರ್ಣ ಮಾಲೆಯಲ್ಲಿ 54 ಅಕ್ಷರಗಳಿವೆ. ಅವುಗಳಲ್ಲಿ ಪ್ರತಿಯೊಂದು ಪುಲ್ಲಿಂಗ ಮತ್ತು ಸ್ತ್ರೀ ಲಿಂಗ ಹಾಗೂ ಶಿವ ಮತ್ತು ಶಕ್ತಿ ಎನ್ನುವ ಅರ್ಥ ನೀಡುತ್ತವೆ. ಈ 54 ವರ್ಣಮಾಲೆಯನ್ನು ಎರಡು ಬಾರಿ ಹಾಕಿದರೆ ಆಗ ಅದು 108ರ ಸಂಖ್ಯೆಯನ್ನು ನೀಡುವುದು. ಈ ರೀತಿಯಲ್ಲಿಯೇ ಕೆಲವು ಸಂಗತಿಗಳು 108 ಎನ್ನುವ ಪವಿತ್ರ ಮೊತ್ತವನ್ನು ನೀಡುವುದು.


ಹೃದಯದ ಚಕ್ರಗಳು


ಹೃದಯದ ಚಕ್ರಗಳು ಶಕ್ತಿ ರೇಖೆಗಳ ಛೇದಕವಾಗಿವೆ. ಒಟ್ಟು 108 ಶಕ್ತಿ ರೇಖೆಗಳು ಒಮ್ಮುಖವಾಗಿ ಹೃದಯ ಚಕ್ರವನ್ನು ರೂಪಿಸುತ್ತವೆ ಎಂದು ಹೇಳಲಾಗುವುದು. ಅವುಗಳಲ್ಲಿ ಒಂದು ಸುಷುಮ್ನಾ ಕಿರೀಟ ಚಕ್ರಕ್ಕೆ ಕಾರಣವಾಗುವುದು. ಅದು ಸ್ವಯಂ ಸಾಕ್ಷಾತ್ಕಾರದ ಹಾದಿ ಎಂದು ಹೇಳಲಾಗುವುದು. ಪ್ರಾಣಯಾಮದ ಮೂಲಕ 108 ಬಾರಿ ಉಸಿರಾಟವನ್ನು ಹೊಂದುವಂತೆ ಶಾಂತವಾಗಿರಲು ಸಾಧ್ಯವಾದರೆ ಜ್ಞಾನೋದಯ ಆಗುವುದು ಎಂದು ಸಹ ಹೇಳಲಾಗುವುದು.


ಉಪನಿಷತ್ತುಗಳ ಹೇಳಿಕೆ


ಉಪನಿಷತ್ತುಗಳಲ್ಲಿ ಹೇಳಿರುವ ಪ್ರಕಾರ ಋಷಿಮುನಿಗಳಿಗೆ ಸಂಬಂಧಿಸಿದಂತೆ ಬುದ್ಧಿವಂತಿಕೆಯ ಗ್ರಂಥಗಳು 108 ಇವೆ. ಭಾವನೆಗಳಲ್ಲಿ 108 ಬಗೆಗಳಿವೆ. ಅದರಲ್ಲಿ 36 ಭೂತಕಾಲಕ್ಕೆ ಸಂಬಂಧಿಸಿರುತ್ತವೆ. 36 ವರ್ತಮಾನಗಳಿಗೆ ಸಂಬಂಧಿಸಿರುತ್ತವೆ ಮತ್ತು 36 ಭವಿಷ್ಯಕ್ಕೆ ಸಂಬಂಧಿಸುತ್ತದೆ ಎಂದು ಹೇಳಲಾಗುವುದು.


ಜ್ಯೋತಿಷ್ಯ ಶಾಸ್ತ್ರಗಳಲ್ಲಿ


ಜ್ಯೋತಿಷ್ಯ ಶಾಸ್ತ್ರಕ್ಕೆ ಸಂಬಂಧಿಸಿದಂತೆ 12 ನಕ್ಷತ್ರ ಪುಂಜಗಳಿವೆ. ಅವುಗಳು 9 ವಿಭಾಗಗಳನ್ನು ಒಳಗೊಂಡಿವೆ. ಅವುಗಳನ್ನು ಚಂದ್ರಕಲಗಳು ಎಂದು ಕರೆಯಲಾಗುವುದು. 12 ನಕ್ಷತ್ರ ಪುಂಜಗಳನ್ನು 9 ಬಾರಿ ಲೆಕ್ಕಿಸಿದರೆ 108ಕ್ಕೆ ಸಮಾನವಾಗಿರುತ್ತದೆ. ಕುಂಡಲಿಯಲ್ಲಿ ಹನ್ನೆರಡು ಮನೆಗಳು ಮತ್ತು 9 ಗ್ರಹಗಳು ಆಳುತ್ತವೆ. ಒಂಬತ್ತು ಗ್ರಹಗಳು 12 ಬಾರಿ ಲೆಕ್ಕಿಸಿದರೆ 108ಕ್ಕೆ ಸಮಾನವಾಗಿರುತ್ತದೆ ಎಂದು ಹೇಳಲಾಗುವುದು.


ದೇವತೆಗಳ ಹೆಸರು


ಹಿಂದೂ ದೇವತೆಗಳಿಗೆ ಸಂಬಂಧಿಸಿದಂತೆ 108 ದೇವತೆಗಳಿವೆ. ಪ್ರತಿಯೊಂದು ದೇವತೆಗಳು ಸಹ 108 ನಾಮಗಳನ್ನು ಹೊಂದಿವೆ. ಭಗವಾನ್ ಶ್ರೀ ಕೃಷ್ಣನು 108 ಗೋಪಿಕೆಯರನ್ನು ಹೊಂದಿದ್ದನು. ಅಂತೆಯೇ 108 ಸೇವಕ ಮತ್ತು ಸೇವಕಿಗಳು ಇದ್ದರು ಎನ್ನಲಾಗುವುದು. 108 ಎನ್ನುವ ಅಂಕೆಯಲ್ಲಿ ಬರುವ 1ರ ಸಂಖ್ಯೆಯು ಉನ್ನತ ಮತ್ತು ಸತ್ಯವನ್ನು ಸೂಚಿಸುತ್ತದೆ. 0 ಎನ್ನುವುದು ಆಧ್ಯಾತ್ಮಿಕ ಆಚರಣೆ, ಶೂನ್ಯತೆ ಮತ್ತು ಸಂಪೂರ್ಣತೆಯನ್ನು ಸೂಚಿಸುತ್ತದೆ. 8 ಎನ್ನುವುದು ಅನಂತ ಅಥವಾ ಶಾಶ್ವತ ಎನ್ನುವ ಅರ್ಥವನ್ನು ನೀಡುವುದು.


ಸೂರ್ಯ ಮತ್ತು ಭೂಮಿ


ಸೂರ್ಯನ ವ್ಯಾಸವು ಭೂಮಿಯ ವ್ಯಾಸಕ್ಕಿಂತ 108 ಪಟ್ಟು ಹೆಚ್ಚಿವೆ. ಅಂತೆಯೇ ಭೂಮಿಯಿಂದ ಸೂರ್ಯನ ಅಂತರವು ಸೂರ್ಯನ ವ್ಯಾಸಕ್ಕಿಂತ 108 ಪಟ್ಟು ಹೆಚ್ಚಾಗಿರುತ್ತದೆ. ಅಂತೆಯೇ ಭೂಮಿಯಿಂದ ಚಂದ್ರನ ಅಂತರವು ಚಂದ್ರನ ವ್ಯಾಸಕ್ಕಿಂತ 108 ಪಟ್ಟು ಹೆಚ್ಚಾಗಿರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಬೆಳ್ಳಿಯು ಚಂದ್ರನನ್ನು ಪ್ರತಿನಿಧಿಸುತ್ತದೆ. ಬೆಳ್ಳಿಯ ಪರಮಾಣು ತೂಕವು 108ನ್ನು ಹೊಂದಿರುತ್ತದೆ.


ಧಾರ್ಮಿಕ ಸಂಗತಿಯಲ್ಲಿ


ಧ್ಯಾನದ ಶೈಲಿಯು 108 ಪ್ರಕಾರಗಳನ್ನು ಒಳಗೊಂಡಿದೆ. ಅಂತೆಯೇ ದೇವರ ಮಾರ್ಗಗಳು 108 ಬಗೆಯಲ್ಲಿ ಇರುತ್ತವೆ. ಅವೆಲ್ಲವೂ ವಿಶೇಷ ಹಾಗೂ ಶಕ್ತಿಯಿಂದ ಕೂಡಿರುತ್ತವೆ. 108 ದೇವತೆಗಳು 108 ಹೆಸರಿನಿಂದ ಕೂಡಿವೆ. ಅವುಗಳ ನಾಮ ಜಪವನ್ನು ನಿತ್ಯವೂ ಜಪಿಸಿದರೆ ಉತ್ತಮ ಫಲ ದೊರೆಯುವುದು. ಪಾಪಗಳ ವಿಮೋಚನೆ ಆಗುವುದು.


ಹಿಂದೂ ಧರ್ಮದಲ್ಲಿ


ಹಿಂದೂ ಧರ್ಮವು ಅತ್ಯಂತ ವಿಶಾಲ ಹಾಗೂ ವಿಶೇಷ ಸಂಗತಿಗಳಿಂದ ಕೂಡಿವೆ. ಹಿಂದೂ ಧರ್ಮದಲ್ಲಿ 108ರ ಸಂಖ್ಯೆಯನ್ನು ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗಿದೆ. ಹಿಂದೂ ಧರ್ಮದಲ್ಲಿ 108 ದೇವತೆಗಳು, 108 ಪದ್ಧತಿಗಳು, 108 ದೇವತೆಗಳ ನಾಮಗಳು, 108 ಹಬ್ಬ ಹರಿದಿನಗಳು, 108 ಧಾರ್ಮಿಕ ವಸ್ತುಗಳು, 108 ಸಮಿತ್ತುಗಳು, ಜಪ ಮಾಲೆಯಲ್ಲಿ 108 ಮಣಿಗಳು, 108 ಧರ್ಮ ನೀತಿಗಳನ್ನು ಒಳಗೊಂಡಿದೆ.


ಇತರ ಧರ್ಮಗಳಲ್ಲಿ


ಇಸ್ಲಾಂ ಧರ್ಮದಲ್ಲೂ ಸಹ 108 ಸಂಖ್ಯೆಯಲ್ಲಿ ದೇವರನ್ನು ಉಲ್ಲೇಖಿಸಲಾಗಿದೆ. ಜೈನ ಧರ್ಮದಲ್ಲಿ 108 ಸಂಖ್ಯೆಯು ಕ್ರಮವಾಗಿ 12, 8, 36, 25 ಮತ್ತು 27 ಸದ್ಗುಣಗಳನ್ನು ಒಳಗೊಂಡಿವೆ. ಅವು ಐದು ವರ್ಗಗಳ ಪವಿತ್ರ ಸಂಯೋಜಿತ ಸದುಣಗಳಾಗಿವೆ. ಸಿಖ್ ಧರ್ಮದಲ್ಲಿ 108 ಗಂಟುಗಳನ್ನು ಮಣಿಗಳ ಪರವಾಗಿ ಬಳಸುವರು. ಬೌದ್ಧರು ಹೊಸ ವರ್ಷವನ್ನು ಆಚರಿಸುವಾಗ 108 ಬಾರಿ ಗಂಟೆಯನ್ನು ಬಾರಿಸುತ್ತಾರೆ. ಅವರು 108 ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು ಎನ್ನುತ್ತಾರೆ. ಅಂತೆಯೇ 108 ಬಗೆಯ ಅಪವಿತ್ರತೆ ಇದೆ ಎಂದು ಹೇಳುವರು. ಚೀನೀ ಬೌದ್ಧರು ಮತ್ತು ಟಾವು ವಾದಿಗಳು 108 ಮಣಿಯ ಮಾಲೆಯನ್ನು ಬಳಸುತ್ತಾರೆ. ಇದನ್ನು ಸು-ಚು ಎಂದು ಕರೆಯುತ್ತಾರೆ. ಇವುಗಳಲ್ಲಿ 3 ವಿಭಜನೆಯ ಮಣಿಗಳು ಇರುತ್ತವೆ. ಮಾಲೆಯಲ್ಲಿ ತಲಾ 36 ಮಣಿಗಳಂತೆ ಮೂರು ಭಾಗಗಳಾಗಿ ವಿಂಗಡಿಸಲಾಗುತ್ತದೆ. ಚೀನೀ ಜ್ಯೋತಿಷ್ಯವು 108 ಪವಿತ್ರ ನಕ್ಷತ್ರಗಳಿವೆ ಎಂದು ಹೇಳುತ್ತದೆ.


ಸಂಪ್ರದಾಯ ಹಾಗೂ ನಂಬಿಕೆ


ಕೆಲವು ನಂಬಿಕೆಗಳ ಪ್ರಕಾರ ಮಾನವನ ಆತ್ಮವು 108 ಹಂತಗಳಲ್ಲಿ ಹಾದು ಹೋಗುತ್ತವೆ. ಪ್ರಶಂಸನೀಯ ಆತ್ಮಗಳು 108 ಗುಣಗಳನ್ನು ಹೊಂದಿರುತ್ತವೆ. ಭಾರತೀಯ ಸಾಂಪ್ರದಾಯಿಕ ನೃತ್ಯಗಳಲ್ಲಿ 108 ಪ್ರಕಾರಗಳಿರುವುದನ್ನು ಕಾಣಬಹುದು. ಪ್ರತಿಯೊಂದು ಜಪ ಮಾಲೆಯಲ್ಲಿ 108 ಮಣಿಗಳಿರುತ್ತವೆ. ಅವುಗಳಲ್ಲಿ ಒಂದು ದೊಡ್ಡ ಗಾತ್ರವನ್ನು ಹೊಂದಿರುವುದು ಒಂದು ಸಂಪ್ರದಾಯವಾಗಿರುತ್ತದೆ. ಆ ದೊಡ್ಡ ಮಣಿಯು ಮೇಲೆಯ ಪ್ರಾರಂಭ ಮತ್ತು ಅಂತ್ಯವನ್ನು ಸೂಚಿಸುವುದು.


​ಶ್ರೇಷ್ಠವಾದ ಸಂಖ್ಯೆ


108 ಎನ್ನುವುದು ಅತ್ಯಂತ ಪವಿತ್ರವಾದ ಸಂದೇಶ ಹಾಗೂ ಅರ್ಥವನ್ನು ನೀಡುವುದರಿಂದ ಜಗತ್ತಿನಲ್ಲಿ 108ನ್ನು ಅತ್ಯಂತ ಶ್ರೇಷ್ಠವಾದ ಸಂಖ್ಯೆ ಎಂದು ಪರಿಗಣಿಸಲಾಗಿದೆ. ಅಂತೆಯೇ 108 ದೈವ ಶಕ್ತಿಯೊಂದಿಗೆ ಸಂಯೋಜನೆಯನ್ನು ಪಡೆದುಕೊಂಡ ಸಂಖ್ಯೆ. ನಾವು ಮಾಡುವ ಜಪ ಅಥವಾ ಮಂತ್ರಗಳು 108ರ ಸಂಖ್ಯೆಯಲ್ಲಿ ಇದ್ದರೆ ಅದು ಬಹುಬೇಗ ದೇವರ ಸಂಪರ್ಕ ಪಡೆಯುವುದು. ಅದರೊಂದಿಗೆ ನಮಗೆ ಪುಣ್ಯ ಹಾಗೂ ಅದೃಷ್ಟಗಳು ಪ್ರಾಪ್ತಿಯಾಗುತ್ತವೆ ಎನ್ನಲಾಗುವುದು.

Wednesday, 9 December 2020

ಚಂದ್ರಮಾ,... ಏನ ಕಲಿಯಲಿ ನಿನ್ನಲಿ. (ಸಂಗ್ರಹಣೆ)

...ಏನ ಕಲಿಯಲಿ ನಿನ್ನಲಿ...

ಪಾಲ್ಗಡಲಲಿ ಪುಟ್ಟಿ, ರಮೆಯನು ಸೋದರಿಯಾಗಿ ಪಡೆದು ಭುವಿಯ ನಭೋಮಂಡಲಕೆ ಶೋಭೆ ತಂದ ಹಗ್ಗಳಿಕೆಯ ಸುರನೆಂಬ ಪರಿಯನೇ... 

ಸುರರ ಸುಧೆಯನು ಕದ್ದು ಕುಡಿದ ದೈತ್ಯಕಳ್ಳರನ್ನು ಹಿಡಿದುಕೊಟ್ಟ ನೀನು, ನಿನ್ನ ಗುರು ಪತ್ನಿಯನ್ನೇ ಮೋಹಿಸಿ, ಕಳ್ಳತನದಿ ಅಪಹರಿಸಿ ಕಳನಾಯಕನಾದ ಪರಿಯನೇ....

ಗುರು ಪತ್ನಿಯನು ಮೋಹಿಸಿ, ಅಪಹರಿಸಿದಲ್ಲದೇ ಅವಳ ರಮಿಸಿ ಅವಳಿಗೊಂದು ಬುಧನನೆಂಭೋ ಕೂಸನಿತ್ತು, ಗುರುವಿಗೆ ತನ್ನ ಪತ್ನಿಯ ಹಿಂತಿರುಗಿಸಿದ ಪರಿಯನೇ..

ಹೊರ ಜಗತ್ತಿಗೆ ನೋಟ ಮಾತ್ರದಲ್ಲಿ ಆಕರ್ಷಿಸುವ ಅಂದ ಹೊಂದಿದ್ದು, ಚಾರಿತ್ರ್ಯ ಹೀನ ಕಾರ್ಯಗಳ ಮಾಡಿ, ಕರಾಳ ಗೋಮುಖ ವ್ಯಾಘ್ರನಂತೆ ನಡೆದುಕೊಂಡ ಪರಿಯನೇ...

ಬಿದಿಗೆಯ ಸುಂದರ ಚಂದ್ರನಾಗಿ ಚಂದ್ರಶೇಖರನ ಜಟೆಯ ಅಲಂಕರಿಸಿ, ನಿನ್ನ ಅಸ್ತಿತ್ವದಿಂದ ಪರಶಿವನ ಅಂದಕೆ ಶೋಭೆ ತಂದ ಪರಿಯನೇ...

ಬಾಲ ಶ್ರೀರಾಮನಿಗೆ ಸುಂದರವಾದ ಬೆಳ್ಳಿಯ ಆಟಿಕೆ ಎಂಬ ಆಸೆ ಹುಟ್ಟಿಸಿ ಮುದ್ದು ಮಗುವಿಗೆ ನೀನೊಬ್ಬ ಆಟಿಕೆಯ ವಸ್ತು ಎಂದು ನಂಬಿಸಿ, ಮುಗ್ಧ ಮನದೊಂದಿಗೆ ಚೆಲ್ಲಾಟವಾಡುವ ಪರಿಯನೇ.....
 
ಒಡಹುಟ್ಟಿದ ಸಹೋದರಂತೆ ನಂಬಿದ ತಾಯಂದಿರು, ತನ್ನ ಮಕ್ಕಳಿಗೆ ಚಂದಮಾಮನೆಂದು ನಿನ್ನ ತೋರುತ ಪರಿಚಯಿಸಿ, ಮೈ ಮರೆಸಿ ಉಣಿಸಿ, ಮಕ್ಕಳ ತಣಿಸುವ... ಅವರ ಮುಗ್ದ ಮನಕೆ ಮುದ ನೀಡುವ ಪರಿಯನೇ...

ಹಗಲಿನಲಿ ಇನನ ಬೇಗೆಯನು ಹೀರಿ, ಸುಟ್ಟು ಸುಣ್ಣವಾದರೂ, ಕಾಣದ ನಿಷೆಯಲಿ ಬೆಳಕು ಚೆಲ್ಲಿ ಇಳೆಗೆ ತಂಪನೆರೆದು,... ತಾನು ಸುಟ್ಟರೂ ಪರರಿಗೆ ತಂಪನೆರೆದು ಕಾಂತಿಯ ದಾರಿದೀಪವಾಗುವ ಪರಿಯನೇ...

ಪೌರ್ಣಮಿಯ ದಿನದಂದು ಸಾಗರದಲೆಗಳ ಹುರಿದುಂಬಿಸಿ ಉಬ್ಬಿಸಿ ಪಯಣಿಗರಲ್ಲಿ ಜೀವಭಯವ ಹುಟ್ಟಿಸಿ ಕಾಡುವ ಪರಿಯನೇ...

ಹುಲು ಮಾನವರಾದ ನಮ್ಮ ಮನೋ ಚಂಚಲೆತೆಗೆ ಕಾರಣೀಭೂತನಾಗಿ, ಇನ್ನೊಬ್ಬರ ಮನಸ್ಸಿನೊಂದಿಗೆ ಚಲ್ಲಾಟವಾಡುವ ಪರಿಯನೇ...

ನಿನ್ನ ನೋಡುತ ಕಾಲಹರಣ ಮಾಡುವ ಪ್ರೇಮಿಗಳ ಮನಸನ್ನ ಸೂರೆಗೊಂಡು, ಇಲ್ಲದ ಉದ್ವೇಗಗಳನು ಅವರ ಮನದಲಿ ಹುಟ್ಟಿಸಿ ಮನೆ ಮಠ ಮರೆಯುವಂತೆ ಸಮ್ಮೋಹನ ಮಾಡುವ ಪರಿಯನೇ....

ತನಗೆ ಸುಂದರ ವದನವಿದೆ ಎಂದು ಗಣಪನ ದೇಹಾಕೃತಿಯ ನೋಡಿ ಹಂಗಿಸಿ ಶಾಪವ ಹೊಂದಿ ಕಳೆಗುಂದಿ ಇನ್ನೊಬ್ಬರ ಹೀಯಾಳಿಸಬಾರದೆಂಬ ಪಾಠ ಕಲಿತ ಪರಿಯನೇ...

ಭಾದ್ರಪದ ಶುಕ್ಲ ಚೌತಿಯ ದಿನದಂದು ನಿನ್ನ ದರ್ಶನ ಮಾತ್ರಕ್ಕೆ ಶಮಂತಕ ಮಣಿ ಕದ್ದ ಕೊಲೆಗಾರನೆಂಬ ಆರೋಪ ಹೊತ್ತು ಶ್ರೀ ವೇಣುಗೋಪಾಲನನ್ನೇ ಬಿಡದೆ ಕಾಡಿ ದುರ್ವಿಧಿಯನಿತ್ತು, ಕಳಾವಂತ ಕಳಾಹೀನನಾಗಿ, ನಿನ್ನ ಮುಖದರ್ಶನವೇ ಬೇಡವೆಂದು ಎಲ್ಲರೂ ತಲೆತಗ್ಗಿಸಿ ಕೊಳ್ಳುವಂತೆ ಬಾಳಿದ ಪರಿಯನೇ...

.....ಹೇಳು ಚಂದ್ರಮಾ,... ಏನ ಕಲಿಯಲಿ ನಿನ್ನಲಿ....

✍️ ವಿಡಂಬನೆ

ಇಲ್ಲದ ಉತ್ಪ್ರೇಕ್ಷೆ, ಆಡಂಬರ ಸಹಿಸನೀ ವೇಣುಗೋಪಾಲನು.