ವಯೋಜನ್ಯ ಸಮಸ್ಯೆಗಳು
ಇಲ್ಲಿಯವರೆಗೆ ಮಾನವನ ಜೀವನ ವಿಧಾನ, ಅದರಿಂದಾಗತಕ್ಕ ಅನಾರೋಗ್ಯ, ಅದಕ್ಕೆ ಕಾರಣ ಹೇಳುತ್ತಾ ಬಂದು ಈಗ ಮರಣಪ್ರಶ್ನವೆಂಬ ಕೊನೆಯ ಅನಾರೋಗ್ಯ ಕಾರಣ ವಿವರಿಸಲಾಗುತ್ತದೆ.
ಅಲ್ಲಿ ಪ್ರತಿಯೊಬ್ಬ ಮನುಷ್ಯನೂ ಸಾಧಿಸಬೇಕಾದ ಸುಖಮರಣವೆಂಬ ಸೂತ್ರ ಮಂಡಿಸಲಾಗಿದೆ. ಆ ಸುಖಮರಣ ಹೇಗೆ ಎಂಬುದನ್ನು ತಿಳಿಸುತ್ತೇನೆ.
🕉️ಮೊದಲನೆಯದಾಗಿ, ಮಾನವ ಹುಟ್ಟುವಾಗಲೇ ತನಗೆ ಸಾವಿದೆ ಎನ್ನುವ ಸತ್ಯ ತಿಳಿದಿದೆ ತಾನೆ? ಹಾಗಿದ್ದಾಗ ಸಾವು ನಿಶ್ಚಿತವೆಂದ ಮೇಲೆ ಸಾಯುವಲ್ಲಿಯವರೆಗೆ ಮಾತ್ರ ನಮ್ಮ ಸಾಧನೆ, ಯಶಸ್ಸಿಗೆ ಪೂರಕವೆಂಬ ಸತ್ಯ ಅರಿತಿರಬೇಕು.
🕉️ ಎರಡನೆಯದಾಗಿ, ಸಾವು ಭಯಾನಕವೆಂಬ ಕಲ್ಪನೆ ಹುಟ್ಟುವುದು ಬಾಂಧವ್ಯದ ಪ್ರಬಲ ಬೆಸುಗೆಯಿಂದ ಮಾತ್ರ.
ಸಂಬಂಧ ಬೆಸುಗೆಯು ಕರ್ತವ್ಯಪ್ರಜ್ಞೆಯೊಂದಿಗೆ ಹೊಂದಿಸಿಕೊಂಡಲ್ಲಿ ನಿಮ್ಮ ಮಾನವ ಸಂಬಂಧೀ ಬಾಂಧವ್ಯ ಮತ್ತು ವಸ್ತು ಸಂಬಂಧೀ ಬಾಂಧವ್ಯ ಸುಧಾರಿಸಿಕೊಳ್ಳಲು ಸಾಧ್ಯ. ಆಗ ಸಾವು ಭಯಾನಕವೆನಿಸುವುದಿಲ್ಲ.
🕉️ಮೂರನೆಯದಾಗಿ, ಸಾವು ತ್ರಾಸದಾಯಕವೆಂಬ ಕಲ್ಪನೆ, ನೋವು, ದುಃಖ, ರೋಗಬಾಧೆ, ಕರ್ತವ್ಯ ಲೋಪದ ಪ್ರಜ್ಞೆ, ಪಾಪಪ್ರಜ್ಞೆ ಇವೆಲ್ಲಾ ಕಾಡುವುದು ಅಲ್ಲಿ ನ್ಯೂನತೆ ಇದ್ದಾಗ ಮಾತ್ರ.
ಆದ್ದರಿಂದ ಪರಿಶುದ್ಧ ಜೀವನ ನಡೆಸಿ. ಆಗ ಈ ಪಾಪಪ್ರಜ್ಞೆ ನಿಮ್ಮನ್ನು ಕಾಡಲಾರವು, ತ್ರಾಸದಾಯಕ ಮರಣ ಪ್ರಾಪ್ತವಾಗಲಾರದು.
🕉️ನಾಲ್ಕನೆಯದಾಗಿ, ಹಂಚಿ ತಿನ್ನುವ ಪ್ರವೃತ್ತಿ ನಿಮ್ಮದಾಗಿದ್ದರೆ, ನಿಮ್ಮ ಎಲ್ಲಾ ಸಂದರ್ಭಗಳಲ್ಲೂ ಈ ಹಂಚುವಿಕೆಯ ಕಾರ್ಯ ನಿರ್ವಹಿಸುತ್ತದೆ.
ಹಾಗಾಗಿ ನಮ್ಮ ನಂತರ ಮುಂದೇನು ಎನ್ನುವ ಪ್ರಶ್ನೆ ಉದ್ಭವಿಸುವುದಿಲ್ಲ. ಹಾಗಾಗಿ ಸರ್ವಜ್ಞ ವಚನದ "ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ, ಕೊಟ್ಟು ನಾ ಕೆಟ್ಟನೆಂದೆನ ಬೇಡ ಸರ್ವಜ್ಞ" ಎಂಬಂತೆ ಎಲ್ಲವನ್ನೂ ಹಂಚಿಕೊಳ್ಳುವ ಪ್ರವೃತ್ತಿ ಬೆಳೆಸಿಕೊಳ್ಳಿ. ಆಗ ಅನಾಥ ಪ್ರಜ್ಞೆ ಹುಟ್ಟುವುದಿಲ್ಲ.
🕉️ಈ ನಾಲ್ಕು ವಿಧಾನಗಳನ್ನು ತುಲನೆ ಮಾಡಿದಾಗ ನಮಗೆ ಮರಣವೆಂದರೇನು ಎಂದು ಅರ್ಥವಾಗುತ್ತದೆ.
🕉️ದೇಹ ಆತ್ಮಗಳ ಸಂಬಂಧ ಕಡಿದುಕೊಳ್ಳುವುದು ಮರಣವಲ್ಲ. ದೇಹ ನಾಶವಾದರೂ ಈ ಭುವಿಯ ಬಂಧದಿಂದ ಬಿಡಿಸಿಕೊಂಡು ಸ್ವತಂತ್ರತೆಯನ್ನು ಪಡೆಯುವುದು. ಅಲ್ಲಿ ಕಲಂಕವಿರದೇ ಇರುವಂತೆ ಬದುಕಿರುವುದು.
🕉️ಕಲಂಕಿತನಾಗಿದ್ದು ದೇಹದೊಂದಿಗೇ ಇದ್ದರೂ ಕೂಡ ಅದು ಮರಣವೆಂದು ಕರೆಯಲ್ಪಡುತ್ತದೆ. ಹಾಗಾಗಿ ತನ್ನ ಜೀವನದಲ್ಲಿ
🌸ಶುದ್ಧತೆ,
🌸ಬದ್ಧತೆ,
🌸ತ್ಯಾಗ,
🌸ಸಹನೆ,
🌸ಧರ್ಮನಿಷ್ಠೆ,
🌸ದೇಶಭಕ್ತಿ,
🌸ಮಾತೃಭಕ್ತಿ,
🌸ಪಿತೃಭಕ್ತಿ,
🌸ಗುರುಭಕ್ತಿ,
🌸ಸಮಾಜಪ್ರೇಮ,
🌸ಪ್ರಕೃತಿಪ್ರೇಮ,
🌸ಕರ್ತವ್ಯ,
🌸ಸತ್ಯ,
🌸ನ್ಯಾಯ
ಇವನ್ನು ರೂಢಿಸಿಕೊಂಡಲ್ಲಿ "ಮಾನವನಿಗೆ ಮರಣವೇ ಬಾರದು". ದೇಹ ಬಿಡುವುದು ಅನಿವಾರ್ಯ. ಆದರೆ ಆತನಿಗೆ ಸಾವಿಲ್ಲ ಅರ್ಥಾತ್ "ಮರಣವಿಲ್ಲ".
🕉️ಆದ್ದರಿಂದ ಮನುಷ್ಯ ಮಿತಾಹಾರಿಯಾಗಿ ಸಮಾಜಕ್ಕೆ ತನ್ನ ಋಣವನ್ನು ತೀರಿಸುತ್ತಾ ನಿಷ್ಕಳಂಕನಾಗಿ ಬದುಕುವುದೇ ಗುರಿ.
🕉️ಹಾಗೆ ಬದುಕಿದಲ್ಲಿ ಮರಣಕ್ಕೆ ಹೆದರಬೇಕಾದ್ದಿಲ್ಲ. ಅಂದರೆ ಸಾವಿನ ಭಯವಿಲ್ಲ. ಜ್ಯೋತಿರಾಯುರ್ವೇದ ಎಂದರೆ ಮನುಷ್ಯ ಜೀವನದ ಮೇಲೆ ಬೆಳಕು ಚೆಲ್ಲಿ ಸನ್ಮಾರ್ಗದರ್ಶನ ಮಾಡುವ ಒಂದು ಸಿದ್ಧಾಂತ. ಅಲ್ಲಿ ಬದುಕುವ ಬಗೆಯನ್ನು ವಿವರವಾಗಿ ವಿವರಿಸಿದೆ. ಅದನ್ನು ಮುಂದಿನ ಲೇಖನದಲ್ಲಿ ವಿವರಿಸುತ್ತೇನೆ.
No comments:
Post a Comment